ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್
ಬೆಂಗಳೂರು: ಡಿಜಿಟಲ್ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ ಮತ್ತು ಗ್ರೀನ್ ಹೈಡ್ರೋಜನ್ ಕಂಪನಿ ಇನ್ನೋವೇಶನ್ ಪ್ಲಾಟ್‌ಫಾರ್ಮ್ ಕ್ಯಾಪಿಟಲ್ (ಐಪಿಸಿ) ರಾಜ್ಯದಲ್ಲಿ ಮೂರು ಹಂತಗಳಲ್ಲಿ 83 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿಸಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಕಂಪನಿ ವ್ಯವಸ್ಥಾಪಕ ಪಾಲುದಾರ ಗುರುಶರಣ್ ಸಿಂಗ್ ಕುಂದನ್ ನಿಯೋಗ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ಈ ಬಗ್ಗೆ ಮಾಹಿತಿ ನೀಡಿರುವ ಸಚಿವರು, ಐಪಿಸಿ ಕಂಪನಿಯು ಬೆಂಗಳೂರು- ತುಮಕೂರು ಇಂಟಿಗ್ರೇಟೆಡ್ ಗ್ರೀನ್ ಹೈಡ್ರೋಜನ್ ಮತ್ತು ಕ್ರಮವಾಗಿ 2,500 ಮೆಗಾವಾಟ್ ಐಟಿ ಲೋಡ್ ಮತ್ತು 1,000 ಮೆಗಾವಾಟ್ ಸಾಮರ್ಥ್ಯದ ಹೈಪರ್ ಸ್ಕೇಲ್ ಡೇಟಾ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಇದಕ್ಕಾಗಿ ಮೊದಲ ಹಂತದಲ್ಲಿ 17,114 ಕೋಟಿ ರೂ. ಹೂಡಿಕೆ ಮಾಡಲು ಬಯಸಿದೆ ಎಂದರು.
ಕಂಪನಿಯು ಮೊದಲ ಹಂತದಲ್ಲಿ ತಲಾ 200 ಮೆಗಾವಾಟ್ ಸಾಮರ್ಥ್ಯದ 2 ಡೇಟಾ ಕೇಂದ್ರಗಳನ್ನು ಮತ್ತು 500 ಮೆಗಾವಾಟ್ ಸಾಮರ್ಥ್ಯದ ಗ್ರೀನ್ ಹೈಡ್ರೋಜನ್ ಸ್ಥಾವರ ಮತ್ತು ಇಂಧನ ಸಂಕೀರ್ಣವನ್ನು ಸ್ಥಾಪಿಸಲಿದೆ. ಇದಕ್ಕಾಗಿ ಕಂಪನಿಯು 1,000 ಎಕರೆ ಜಾಗ ಕೇಳಿದೆ. ಇದರಲ್ಲಿ ಎರಡು ಸೌಕರ್ಯಗಳಿಗೆ ತಲಾ 400 ಎಕರೆ ಬಳಸುವ ಉದ್ದೇಶ ಹೊಂದಿದೆ.
ಉಳಿದ 200 ಎಕರೆಯು ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆಗಾಗಿ ಮೀಸಲಿರಲಿದೆ. ಜತೆಗೆ 13 ಎಂಎಲ್ಡಿ ನೀರು ಅಗತ್ಯವಿದೆ ಎಂದು ಕಂಪನಿಯ ಪ್ರತಿನಿಧಿಗಳು ತಿಳಿಸಿದ್ದಾರೆ. ಇದರಲ್ಲಿ ಶೇ. 85 ಸಂಸ್ಕರಿತ ಮೂಲಗಳಿಂದ ಕೊಡುವ ಚಿಂತನೆ ಇದೆ ಎಂದು ಸಚಿವರು ವಿವರಿಸಿದ್ದಾರೆ.
ನಿಯೋಗದಲ್ಲಿ ಕಂಪನಿಯ ಸಿಇಒ ಪ್ರದೀಪ್ ಕಾರಟಗಿ, ವ್ಯವಸ್ಥಾಪಕ ಪಾಲುದಾರ ಜೇಮ್ಸ್ ಕೋಲ್ಟರ್, ವ್ಯವಸ್ಥಾಪಕ ನಿರ್ದೇಶಕ ಎಡ್ಸಾ ಕ್ಯಾಬ್ರೆರ, ಕಾರ್ಪೋರೇಟ್ ವ್ಯವಹಾರಗಳ ಭಾರತೀಯ ಮುಖ್ಯಸ್ಥ ಡಿ.ಕೆ. ಅರ್ಜುನ್ ಮುಂತಾದವರಿದ್ದರು.