ಮದ್ದೂರು ನಗರದ ಪಿಎಲ್‌ಡಿ ಬ್ಯಾಂಕ್‌ನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಪ್ರಗತಿಪರ ರೈತರನ್ನು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹಾಗೂ ಗಣ್ಯರು ಅಭಿನಂದಿಸಿದರು. ಶಿವಲಿಂಗೇಗೌಡ, ಡಾ.ಕೃಷ್ಣ, ಲಕ್ಷ್ಮೀ ಅಶ್ವಿನ್‌ಗೌಡ, ಡಿ.ಪಿ.ಶಿವಪ್ಪ, ವಿ.ಸಿ.ಉಮಾಶಂಕರ್ ಇದ್ದರು. 
ರಾಜ್ಯ

ಕನ್ನಡ ಭಾಷೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ.ಶ್ರೀ ನಿಶ್ಚಲಾನಂದ ಸ್ವಾಮೀಜಿ ಸಲಹೆ

ಮದ್ದೂರು: ಕನ್ನಡ ಭಾಷೆಗೆ ಸುಮಾರು 3 ಸಾವಿರ ವರ್ಷಗಳ ಇತಿಹಾಸವಿರುವುದು ಹೆಮ್ಮೆಯ ವಿಷಯ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು.
ನಗರದ ಪಿಎಲ್‌ಡಿ ಬ್ಯಾಂಕ್‌ನ ಕುವೆಂಪು ಸಭಾಂಗಣದಲ್ಲಿ ಬುಧವಾರ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಮತ್ತು ಚುಂಚಶ್ರೀ ಗೆಳೆಯರ ಬಳಗ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ರೈತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕನ್ನಡ ರಾಜ್ಯೋತ್ಸವದಂತಹ ಆಚರಣೆಗಳು ಅತ್ಯವಶ್ಯಕವಾಗಿದ್ದು ಭಾಷೆ, ನೆಲ, ಜಲ, ಸಂಸ್ಕೃತಿ, ಆಚಾರ-ವಿಚಾರ, ಸಾಹಿತ್ಯಗಳ ಬಗ್ಗೆ ಸ್ಮರಣೆ ಮಾಡುವುದರ ಜತೆಗೆ ಮುಂದಿನ ಪೀಳಿಗೆಗೂ ಪರಿಚಯಿಸಬೇಕಾದ ಅನಿವಾರ್ಯತೆಯಿದ್ದು ಪ್ರತಿಯೊಬ್ಬ ಕನ್ನಡಿಗನೂ ಭಾಷಾಭಿಮಾನವನ್ನು ಮೆರೆಯಬೇಕೆಂದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ಚಂದೂಪುರ ಶಿವಲಿಂಗೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆಯನ್ನು ಪ್ರತಿಯೊಬ್ಬರೂ ಹೆತ್ತ ತಾಯಿಯಂತೆ ಪ್ರೀತಿಸಬೇಕು. ವಿಶ್ವದಲ್ಲಿ ಕನ್ನಡದಂತೆ ಸರಳವಾದ ಹಾಗೂ ಅರ್ಥರ್ಪೂರ್ಣವಾದ ಬಾಷೆ ಬೆರೆಯಾವುದು ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಗತಿಪರ ರೈತರಾದ ಬಿ.ಕೆ.ಶಿವಸ್ವಾಮಿ, ನಾಥೇಗೌಡ(ಬೊಪ್ಪಸಮುದ್ರ), ಸುರೇಶ್(ಸೊಳ್ಳೆಪುರ), ಜವರಾಯಿಗೌಡ(ಚಂದೂಪುರ), ಉಮೇಶ್(ವಳಗೆರೆಹಳ್ಳಿ), ಚಿಕ್ಕಹುಚ್ಚೇಗೌಡ(ಡಿ.ಎ.ಕೆರೆ) ಅವರನ್ನು ಕಾರ್ಯಕ್ರಮದ ವೇಳೆ ಅಭಿನಂದಿಸಿ ಗೌರವಿಸಲಾಯಿತು.
ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ, ಸಮಾಜ ಸೇವಕಿ ಲಕ್ಷ್ಮೀ ಅಶ್ವಿನ್‌ಗೌಡ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಪಿ.ಶಿವಪ್ಪ, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ, ಮುಖಂಡರಾದ ಸೋ.ಶಿ.ಪ್ರಕಾಶ್, ಲಿಂಗರಾಜು, ಯರಗನಹಳ್ಳಿ ಮಹಾಲಿಂಗು, ನಾಗರಾಜು, ಶಿವಲಿಂಗಯ್ಯ, ಸುಜಾತಾ ಕೃಷ್ಣ, ಸೋಂಪುರ ಉಮೇಶ್, ಕುದರಗುಂಡಿ ನಾಗರಾಜು ಇತರರಿದ್ದರು.