- ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಬದಲು ಸರ್ಕಾರಿ ಸಂಸ್ಥೆಗಳಲ್ಲಿಯೇ ತರಬೇತಿ ನೀಡಿದಂತಾಗುತ್ತದೆ
- ಪಂಚಾಯತಿ ಹಂತದಲ್ಲಿ ತರಬೇತಿ ನೀಡುವುದರಿಂದ ಸಿವಿಲ್ ಕೆಲಸಗಳಿಗೆ ಕೆಲಸಗಾರರ ಕೊರತೆ ನೀಗಲಿದ್ದು, ಪಂಚಾಯಿತಿಗಳಲ್ಲಿ ಕೆಲಸಗಳಿಗೆ ವೇಗ ಸಿಗಲಿದೆ
- ಪ್ರತಿ ಸೆಮಿಸ್ಟರ್‌ನಲ್ಲಿ ಕನಿಷ್ಠ 2,500 ಸಾವಿರ ವಿದ್ಯಾರ್ಥಿಗಳು ಲಭ್ಯ, ಸ್ಟೈಫಂಡ್ ನೀಡುವುದರಿಂದ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿಯೂ ಅನುಕೂಲ
ಬೆಂಗಳೂರು: ಸಿವಿಲ್ ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಡಿಯಲ್ಲಿಯೇ ಇಂಟರ್ನ್‌ಶಿಪ್ ನೀಡಿ ಸ್ವಯಂ ಉದ್ಯೋಗಕ್ಕೂ ದಾರಿ ಕಲ್ಪಿಸಲು ಸರ್ಕಾರ ಚಿಂತನೆ ಮಾಡುತ್ತಿದೆ.
ಮೂಲ ತಾಂತ್ರಿಕ ಕೋರ್ಸ್‌ಗಳಾದ ಸಿವಿಲ್ ಮತ್ತು ಮೆಕಾನಿಕಲ್ ಕೋರ್ಸ್‌ಗಳಿಗೆ ಬೇಡಿಕೆ ಕುಸಿದಿದೆ. ಉದ್ಯೋಗ ದೊರೆಯುತ್ತಿಲ್ಲವೆಂಬ ಪ್ಲೇಸ್‌ಮೆಂಟ್ ಸಮಸ್ಯೆ ಕಾಡುತ್ತಿದೆ. ಈ ನಡುವೆಯೇ ಪಂಚಾಯಿತಿ ಹಂತದಲ್ಲಿ ಸರ್ಕಾರದ ಕೆಲಸಗಳಿಗೇ ವೃತ್ತಿಪರ ಇಂಜಿನಿಯರ್‌ಗಳ ಲಭ್ಯತೆ ಇಲ್ಲದೆ ಕೆಲಸ ಆಮೆಗತಿಯಲ್ಲಿ ಸಾಗುತ್ತಿದೆ. ಇಂತಹ ಕೆಲಸಗಳಿಗೆ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.
ವಿದ್ಯಾರ್ಥಿಗಳು, ಸರ್ಕಾರಕ್ಕೆ ಲಾಭ:
ಪಂಚಾಯತ್‌ರಾಜ್ ಇಲಾಖೆಯಲ್ಲಿ ಇಂಟರ್ನ್‌ಶಿಪ್ ನೀಡುವುದರಿಂದ ವಿದ್ಯಾರ್ಥಿಗಳು ಮತ್ತು ಸರ್ಕಾರಕ್ಕೆ ಇಬ್ಬರಿಗೂ ಲಾಭವಿದೆ. ಒಂದೆಡೆ ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಗಳಲ್ಲಿ ಹಣ ನೀಡಿ ಇಂಟರ್ನ್‌ಶಿಪ್ ಮಾಡುವುದು ತಪ್ಪಲಿದೆ. ಅದೇ ರೀತಿ ಸರ್ಕಾರಕ್ಕೆ ಪಂಚಾಯಿತಿ ಹಂತದಲ್ಲಿ ನಡೆಯಬೇಕಿರುವ ಸಿವಿಲ್ ವರ್ಕ್‌ಗಳಿಗೆ ವಿದ್ಯಾರ್ಥಿಗಳನ್ನು ಬಳಸಿಕೊಂಡು ತರಬೇತಿ ನೀಡುವುದರಿಂದ ವಿದ್ಯಾರ್ಥಿಗಳಿಗೆ ಮಾಸಿಕ ಒಂದಿಷ್ಟು ಸ್ಟೈಂಡ್ ಸಿಗಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿಯೂ ಸಹಾಯವಾಲಿಗದೆ.
2,500 ವಿದ್ಯಾರ್ಥಿಗಳು ಲಭ್ಯ:
ತಾಂತ್ರಿಕ ಶಿಕ್ಷಣ ಇಲಾಖೆಯಡಿ ಬರುವ ಪಾಲಿಟೆಕ್ನಿಕ್‌ಗಳ ಅಂತಿಮ ಸೆಮಿಸ್ಟರ್ ಡಿಪ್ಲೊಮಾ ಸಿವಿಲ್ ಇಂಜಿನಿಯರಿಂಗ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ನಾಲ್ಕನೇ ಮತ್ತು ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕಾಮಗಾರಿ ಕ್ಷೇತ್ರಗಳಲ್ಲಿ ಇಂಟರ್ನ್‌ಶಿಪ್ ಕಡ್ಡಾಯವಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ಅಂದಾಜು ಎರಡು ಸಾವಿರ ವಿದ್ಯಾರ್ಥಿಗಳು ಹಾಗೂ ಕಾಲೇಜುಗಳಲ್ಲಿ ಕನಿಷ್ಠ 500 ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಡಿಪ್ಲೊಮಾ ವಿದ್ಯಾರ್ಥಿಗಳಿಗೆ 16 ವಾರ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಗೆ 4 ವಾರಗಳ ತರಬೇತಿ ನೀಡಬೇಕಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ ಅಡಿ ಬರುವ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ವಿವಿಧ ಕಾಮಗಾರಿಗಳಲ್ಲಿ ತರಬೇತಿ ನೀಡಲು ಅವಕಾಶವಿದೆ.
ಉದ್ಯೋಗವಕಾಶ ಸೃಷ್ಟಿ:
ಈ ತರಬೇತಿಯು ವಿದ್ಯಾರ್ಥಿಗಳನ್ನು ಉತ್ತಮ ವೃತ್ತಿ ತರಬೇತುದಾರರನ್ನಾಗಿ ಮಾಡಲಿದೆ. ಹೆಚ್ಚಿನ ಉದ್ಯೋಗವಕಾಶಗಳು ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲಿದೆ. ಅದರ ಜತೆಗೆ ಇಲಾಖೆಯಲ್ಲಿನ ದೈನಂದಿನ ಕಾರ್ಯಗಳಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ದೊರಕಿ ಇಲಾಖಾ ಕಾರ್ಯಗಳಿಗೂ ನೆರವಾಗಲಿದೆ.
ತರಬೇತಿ ಅನುದಾನದ ಬಗ್ಗೆ ಬೇಕಿದೆ ಸ್ಪಷ್ಟತೆ
ತರಬೇತಿ ಪಡೆಯಲಿರುವ ವಿದ್ಯಾರ್ಥಿಗಳಿಗೆ ಸ್ಟೈಂಡ್ ಯಾವ ಇಲಾಖೆ ನೀಡಬೇಕೆಂಬ ಸ್ಪಷ್ಟತೆ ಇಲ್ಲ. ಈ ವಿಚಾರದಲ್ಲಿ ಸ್ಪಷ್ಟತೆ ಬಂದಲ್ಲಿ ವಾರ್ಷಿಕ ಕನಿಷ್ಠ 2,500 ಜೂನಿಯರ್‌ಗಳು ದೊರೆಯಲಿದ್ದಾರೆ, ಇದರಿಂದ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಅತ್ಯಂತ ಸಂಕಷ್ಟದಲ್ಲಿರುವ ಕಂದಾಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳ ಕೆಲಸಗಳಿಗೆ ವೇಗ ಸಿಗಲಿದೆ. ನಿವೇಶನಗಳ ಅಳತೆಗೆ ತಿಂಗಳುಗಟ್ಟಲೆ ಕಾಯಬೇಕಿದ್ದು, ಪಂಚಾಯಿತಿಗಳಲ್ಲಿ ಸರ್ವೆಯರ್‌ಗಳ ಕೊರತೆ ನೀಗಲಿದೆ ಎಂಬುದು ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ತರಬೇತಿ ಸಾಧಕ-ಬಾಧಗಳು
- ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಬದಲು ಸರ್ಕಾರಿ ಸಂಸ್ಥೆಗಳಲ್ಲಿಯೇ ತರಬೇತಿ ನೀಡಿದಂತಾಗುತ್ತದೆ
- ಪಂಚಾಯತಿ ಹಂತದಲ್ಲಿ ತರಬೇತಿ ನೀಡುವುದರಿಂದ ಸಿವಿಲ್ ಕೆಲಸಗಳಿಗೆ ಕೆಲಸಗಾರರ ಕೊರತೆ ನೀಗಲಿದ್ದು, ಪಂಚಾಯಿತಿಗಳಲ್ಲಿ ಕೆಲಸಗಳಿಗೆ ವೇಗ ಸಿಗಲಿದೆ
- ಪ್ರತಿ ಸೆಮಿಸ್ಟರ್‌ನಲ್ಲಿ ಕನಿಷ್ಠ 2,500 ಸಾವಿರ ವಿದ್ಯಾರ್ಥಿಗಳು ಲಭ್ಯ, ಸ್ಟೈಫಂಡ್ ನೀಡುವುದರಿಂದ ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿಯೂ ಅನುಕೂಲ
- ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಸಹಕಾರಿ. ಸಿವಿಲ್ ಕೋರ್ಸ್‌ಗೆ ಬೇಡಿಕೆ ಇಲ್ಲವೆಂಭ ಕೊರಗಿಗೂ ಪರಿಹಾರ
ಡಿಪ್ಲೊಮಾ ಮತ್ತು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿಯೇ ತರಬೇತಿ ನೀಡುವ ಕುರಿತು ಚರ್ಚಿಸಲಾಗುತ್ತಿದೆ. ಒಂದು ವೇಳೆ ಅಂತಿಮವಾದಲ್ಲಿ ಸಿವಿಲ್ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ.