ತೂಬಗೆರೆ ನಾಡಕಚೇರಿಯಲ್ಲಿ ವಿವಿಧ ಅರ್ಜಿ ಸಲ್ಲಿಸಲು ಸಾಲು ನಿಂತಿರುವ ಜನ.
ತೂಬಗೆರೆ : ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ನಾಡಕಚೇರಿಯಲ್ಲಿ ತಿಂಗಳಲ್ಲಿ 15 ದಿನ ಇಂಟರ್ನೆಟ್ ಸಂಪರ್ಕ ಕಡಿತವಾಗುತ್ತಿದ್ದು, ರೈತರಿಗೆ ಪಹಣಿ, ಜಾತಿ, ಆದಾಯ ಪ್ರಮಾಣಪತ್ರ ಹಾಗೂ ಇನ್ನಿತರ ಸೌಲಭ್ಯಗಳ ಪಡೆಯಲು ಪರದಾಡುವಂತಾಗಿದೆ.
ಮಂಗಳವಾರವೂ ಇಂಟರ್ ನೆಟ್ ಸೌಲಭ್ಯ ಇಲ್ಲದಿರುವುದು ಗೊತ್ತಿಲ್ಲದೆ ಬಂದ ಹಲವರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿಕೊಂಡು ಹೋಗುತ್ತಿದ್ದ ದೃಶ್ಯಕಂಡುಬಂತು. ನಾಡಕಚೇರಿಯಲ್ಲಿ ರೈತರಿಗೆ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿದೆ. ಅದರಲ್ಲಿಯೂ ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ ಸೇರಿ ಇತರ ದಾಖಲೆ ಪಡೆಯಲು ಪರದಾಟ ತಪು$್ಪತ್ತಿಲ್ಲ. ಯಾವುದೇ ಕೆಲಸಕ್ಕೂ ಇಂಟರ್ನೆಟ್ ಸೌಲಭ್ಯ ಬೇಕೇಬೇಕು, ಅದರೆ ಇದರ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರೆ ಸರಿಪಡಿಸುತ್ತೇವೆ...ಎಂಬ ಉದಾಸೀನದ ಮಾತು ಹೇಳುತ್ತಾರೆ. ದಿಢೀರ್ ಇಂಟರ್ನೆಟ್ ಸಮಸ್ಯೆ ಕಾಣಿಸಿಕೊಂಡಿದೆ. ಮುಕ್ಕಿಡಿಗಟ್ಟ, ಕಲ್ಕುಕೋಟೆ, ಚಿಕ್ಕ ಮುದ್ದೇನಹಳ್ಳಿ, ಕಮಲೂರು, ಮೇಳೆಕೋಟೆ, ಹಾಡೋನಹಳ್ಳಿ, ಇನ್ನು ಅನೇಕ ಹಳ್ಳಿಗಳಿಂದ ರೈತರು ಪಹಣಿ, ಜಾತಿ -ಆದಾಯ ಪ್ರಮಾಣ ಪತ್ರ, ವಾಸಸ್ಥಳ, ಅಂಗವಿಕಲ, ವೃದ್ಧಾಪ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಇನ್ನಿತರ ನಾನಾ ಅರ್ಜಿಗಳನ್ನು ಸಲ್ಲಿಸಲು ಬಂದು ವಾಪಸ್ ಹೋಗುವಂತಾಗಿದೆ.
ಇಂಟರ್ನೆಟ್ ಕೈಕೊಟ್ಟು ಹತ್ತಾರು ದಿನಗಳಾದರೂ ನೆಟ್ವರ್ಕ್ ಸಾಮರ್ಥ್ಯ ಕಡಿಮೆ ಇರುವುದರಿಂದ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಹೀಗಾಗಿ ಅರ್ಜಿ ವಿಲೇವಾರಿ ವಿಳಂಬವಾಗುತ್ತಿದೆ. ಇದರಿಂದಾಗಿ ದೂರದ ಊರುಗಳಿಂದ ಬರುವ ಸಾರ್ವಜನಿಕರು ತೀವ್ರ ತೊಂದರೆಗೊಳಗಾಗಿದ್ದಾರೆ.
ನಮ್ಮ ಮನೆಯಲ್ಲಿ ಕೂಡ 10 ದಿನಗಳಿಂದ ಇಂಟರ್ನೆಟ್ ಕಟ್ಟಾಗಿ ಸಮಸ್ಯೆ ಆಗಿದೆ. ಎಲ್ಲ ಅಧಿಕಾರಿಗಳಿಗೂ ಫೋನ್ ಮಾಡಿದರು ಸಹ ಇವತ್ತು ಸರಿಪಡಿಸುತ್ತೇನೆ ನಾಳೆ ಸರಿಪಡಿಸುತ್ತೇನೆ ಎನ್ನುತ್ತಾರೆ.