ಗಾಯಕಿ ಮಹನ್ಯ ಪಾಟೀಲ ಜತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಹುಬ್ಬಳ್ಳಿ: ಇಂದು (ಫೆ.08) ನಗರದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಗಾಳಿಪಟದ ಉತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದು, ಹಿನ್ನೆಲೆ ಗಾಯಕರಾದ ಮಹನ್ಯ ಪಾಟೀಲ್, ಸೋನು ನಿಗಮ್ ಅವರ ರಸಸಂಜೆ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು ವಿವಿಧ ಬಣ್ಣಬಣ್ಣದ ಗಾಳಿಪಟದ ಹಾರಾಟದ ಜತೆ ಜತೆಗೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಾಣದಂತೆ ಮಾಯವಾದನೊ ನಮ್ಮ ಶಿವ ಹಾಡನ್ನು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದ್ದು ವಿಶೇಷ.
ನಿನ್ನೆ (ಫೆ.7) ಮತ್ತು ಇಂದು (ಫೆ.08) ಆಯೋಜಿಸಲಾದ 'ಅಂತರಾಷ್ಟ್ರೀಯ ಗಾಳಿಪಟ ಉತ್ಸವ'ಕ್ಕೆ ದೇಶ-ವಿದೇಶಗಳ ಪ್ರಸಿದ್ಧ ಪಟದಾರಿಗಳು ಭಾಗವಹಿಸಿದ್ದು, ಬಾನಂಗಳದಲ್ಲಿ ಹಾರಾಡಲಿದೆ ಬಣ್ಣಬಣ್ಣದ ಗಾಳಿಪಟ ಸಂಸದ ಸಾಂಸ್ಕೃತಿಕ ಮಹೋತ್ಸವಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರಕಿತು.
ಎರಡು ದಿನಗಳ ಈ ಉತ್ಸವದಲ್ಲಿ ಗಾಳಿಪಟ ಹಾರಾಟ, ಆಹಾರ ಉತ್ಸವ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಲೆ, ಚಿತ್ರಕಲಾ ಸ್ಪರ್ಧೆ, ದೇಸಿ ಕ್ರೀಡೆಗಳು, ಮಕ್ಕಳು ಹಾಗೂ ಸಾರ್ವಜನಿಕರಿಗಾಗಿ ದೇಸಿ ಕ್ರೀಡೆಗಳು, ಸುಪ್ರಸಿದ್ಧ ಗಾಯಕ ಸೋನು ನಿಗಮ್, ನಕುಲ್ ಅಭ್ಯಂಕರ, ದಿವ್ಯಾ ರಾಮಚಂದ್ರ, ಜಸ್ಕರಣ್ ಸಿಂಗ್, ಗಾಯಕಿ ಮಹನ್ಯ ಪಾಟೀಲ ತಂಡದವರಿಂದ ನಡೆಯುತ್ತಿರುವ ಸಂಗೀತ ಕಾರ್ಯಕ್ರಮ ಜನರನ್ನು ವಿಶೇಷವಾಗಿ ಸೆಳೆಯಿತು.
ಹುಬ್ಬಳ್ಳಿ ಹೊರವಲಯದ ಕುಸಗಲ್ ರಸ್ತೆಯ ಆಕ್ಸ್‌ಫರ್ಡ್ ಕಾಲೇಜು ಹತ್ತಿರದ ಬೃಹತ್ ಮೈದಾನದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಲ್ಹಾದ ಜೋಶಿ, ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಗಾಯಕಿ ಮಹನ್ಯ ಪಾಟೀಲ ಅವರ 'ಕಾಣದಂತೆ ಮಾಯವಾದೆನೂ ನಮ್ಮ ಶಿವ ಹಾಡಿಗೆ' ದನಿ ಗೂಡಿಸಿದರು. ಈ ವೇಳೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರುಗಳಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.