- ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
- ರು.18 ಕೋಟಿ ಅನುದಾನ
- ಜಿಲ್ಲೆಯ 37 ಸಾವಿರ ರೈತರಿಗೆ ಅನುಕೂಲ
ಕಲಬುರಗಿ: ಮುಂಗಾರು ಮಳೆ ಕೊರತೆಯಿಂದಾಗಿ 2026-27ರ ಬೆಳೆ ವಿಮೆ ಯೋಜನೆಯಡಿ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು ಮತ್ತು ಸೋಯಾಬೀನ್ಗೆ ಮಧ್ಯಂತರ ಪರಿಹಾರ 18 ಕೋಟಿ ರೂ. ಒದಗಿಸಲು ಸರ್ಕಾರಕ್ಕೆ ಜಿಲ್ಲಾಡಳಿತ ವರದಿ ಸಲ್ಲಿಸಿದ್ದು, ಶೀಘ್ರ ಮಂಜೂರಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಜಿಲ್ಲೆಯ 37,051 ರೈತರಿಗೆ ನೆರವಾಗಲಿದೆ. ಕಳೆದ ವರ್ಷವೂ ಜಿಲ್ಲಾಡಳಿತ ಹಾಗೂ ನಮ್ಮೆಲ್ಲರ ಪ್ರಯತ್ನದಿಂದ ಜಿಲ್ಲೆ ರೈತರಿಗೆ ದಾಖಲೆ ಪ್ರಮಾಣದಲ್ಲಿ ಪರಿಹಾರ ಬರಲು ಸಾಧ್ಯವಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸ್ತುತ ಜೂನ್ ಮತ್ತು ಜುಲೈನಲ್ಲಿ ಸತತ ಮೂರು ವಾರ ಮಳೆ ಇಲ್ಲದ 101 ತಾಲೂಕುಗಳನ್ನು ಎನ್ಡಿಆರ್ಎಫ್ ನಿಯಮಾವಳಿ ಪ್ರಕಾರ ಬರಪೀಡಿತ ಘೋಷಿಸಿದ್ದು, ಜಿಲ್ಲೆಯ ಒಂದೂ ತಾಲೂಕು ಇಲ್ಲವೇಕೆ ಎಂಬ ಪತ್ರಕರ್ತರ ಪ್ರಶ್ನೆಗೆ, ಆಗಸ್ಟ್ನಲ್ಲಿ ಅಫಜಲಪುರದಲ್ಲಿ ಶೇ.65, ಆಳಂದ ಶೇ.66, ಚಿಂಚೋಳಿ ಶೇ.61, ಕಲಬುರಗಿ ಶೇ.68, ಜೇವರ್ಗಿ ಶೇ.74, ಕಮಲಾಪುರ ಶೇ.57, ಯಡ್ರಾಮಿ ಶೇ.69 ಹಾಗೂ ಶಹಾಬಾದ್ ಶೇ.62 ಮಳೆ ಕೊರತೆ ಇದೆ. ಮುಂದಿನ ದಿನಗಳಲ್ಲಿ ಈ ತಾಲೂಕುಗಳನ್ನು ಮಾಸಿಕ ಶೇ.55-60 ಮಳೆ ಕೊರತೆ ಪ್ರದೇಶ ಎಂದು ಪರಿಗಣಿಸಿ ಬರಪೀಡಿತ ಘೋಷಿಸಲಾಗುವುದು ಎಂದರು.
ಜನಸ್ನೇಹಿ ಪೊಲೀಸ್ ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯದಲ್ಲಿ ವ್ಯವಸ್ಥೆ ಸುಧಾರಣೆಗೆ ಮರು ರಚನೆ ಸಮಿತಿ ರಚಿಸಿದ್ದು, ತಿಂಗಳಲ್ಲಿ ಸಚಿವ ಸಂಪುಟ ಸಭೆ ಮುಂದೆ ಬರಲಿದೆ. ನಿನ್ನೆಯಷ್ಟೇ ರಾಜ್ಯದ ಬೆಸ್ಟ್ ಪಿಸಿ, ಮುಖ್ಯಪೇದೆಗಳೊಂದಿಗೆ ಸಂವಾದ ನಡೆಸಲಾಗಿದೆ. ಸಿಆರ್ ತಿದ್ದುಪಡಿ ತರಲಾಗುತ್ತಿದೆ. ಡ್ರಗ್ಸ್ ಮಾಫಿಯಾ ಮತ್ತು ಜೂಜಾಟಕ್ಕೆ ಬ್ರೇಕ್, ಯುವ ಜನರನ್ನು ದುಶ್ಚಟದಿಂದ ರಸಲು ನಶೆಮುಕ್ತ, ಬೇಡ ಬ್ರೋ ಅಭಿಯಾನ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಸುಭಾಷ ರಾಠೋಡ್, ಶೈಲೇಶ್ ಹುಲಿ ಚನ್ನೂರ ಇದ್ದರು.
ಬಿಜೆಪಿ ಯಾವ ಉದ್ದೇಶಕ್ಕಾಗಿ ಪಾದಯಾತ್ರೆ ನಡೆಸುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಸಚಿವ ಬಿ. ನಾಗೇಂದ್ರ ವಿರುದ್ಧ ಇದುವರೆಗೆ ಸಮರ್ಪಕ ದಾಖಲೆ ಇಲ್ಲ. ಎಲ್ಲೂ ಅವರ ಹೆಸರು ಉಲ್ಲೇಖವಿಲ್ಲ. ಬಿಜೆಪಿಗರು ಎಲ್ಲೂ ಅವರ ವಿರುದ್ಧ ಒಂದೇ ಒಂದು ದಾಖಲೆ ಬಿಡುಗಡೆ ಮಾಡಿಲ್ಲ. ಚರ್ಚೆಗೂ ಸಿದ್ಧರಿಲ್ಲ. ಆದರೆ ಪಕ್ಷಕ್ಕೆ ಮುಜುಗರ ಆಗಬಾರದೆಂದು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ ಎಂದು ಸಚಿವ ಖರ್ಗೆ ಹೇಳಿದರು.
ಐಟಿಬಿಟಿಗೆ ಸತತ ಕೆಲಸ
ಜಿಸಿಸಿ (ಗ್ಲೋಬಲ್ ಕ್ಯಾಪೆಬಲಿಟಿ ಕೇಂದ್ರ) ಸ್ಥಾಪನೆಗೆ ಬಜೆಟ್ನಲ್ಲಿ ಹೌಸಿಂಗ್ ಬೋರ್ಡ್ನಿಂದ ಎರಡು ಎಕರೆ ಅನುಮೋದನೆ ಆಗಿದೆ. ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ಆಗಲಿದೆ. 25 ಕೋಟಿ ರೂ. ಸರ್ಕಾರ ಮತ್ತು ಕೆಕೆಆರ್ಡಿಬಿಯಿಂದ 50 ಕೋಟಿ ರೂ. ನೀಡಲಾಗುವುದು. ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರದವರು ಕಮಲಾಪುರ ಬಾಳೆ ಹಣ್ಣು, ತೊಗರಿ, ಉದ್ದು, ಹೆಸರಿನ ಉಪ ಉತ್ಪನ್ನಗಳ ಅಭಿವೃದ್ಧಿಗೆ 20 ಕೋಟಿ ರೂ. ನೀಡುತ್ತಿದ್ದು, ಪೌಷ್ಟಿಕಾಂಶ ವೃದ್ಧಿಸಿ ರ್ತು ಹೇಗೆ ಮಾಡಬೇಕು ಎಂಬ ಪ್ರಾಯೋಗಿಕ ಕೆಲಸ ಮುಗಿದಿದೆ. ರುಚಿ ಶೀಘ್ರ ನೀಡುತ್ತೇವೆ ಎಂದು ಸಚಿವ ಖರ್ಗೆ ಹೇಳಿದರು. ರಫ್ತಿಗೆ ಇಲೆಕ್ಟ್ರಾನಿಕ್ಸ್ ಕಟ್ಟಡ ಸಿದ್ಧವಾಗಿದ್ದು, ಆ್ಯಂಕರಿಂಗ್ ಪಾರ್ಟನರ್ ಅಗತ್ಯವಿದೆ. ಟೆಕ್ಸ್ಟೈಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಭಾಗಕ್ಕೆ ಕಟ್ಟಡ ನೀಡುವ ಯೋಜನೆ ಇದ್ದು, ಸಂಸದರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಸ್ಪೇಸ್ ಎಜ್ಯುಕೇಷನ್ ಕೆಮಿಕಲ್ ಗ್ಯಾಸೆಸ್ ಸ್ಟೋರೆಜ್ಗೆ 600 ಎಕರೆ ಕೇಳಿದ್ದು, 350 ಎಕರೆ ಜಮೀನು ತೋರಿಸಲಾಗುತ್ತಿದೆ ಎಂದು ಹೇಳಿದರು.
ಪ್ರಶ್ನೆ ಕೇಳಿದವರ ವಿರುದ್ಧವೇ ಕೇಸ್
ಉತ್ತರಾಖಂಡದಲ್ಲಿ ಕಾನೂನು ಉಲ್ಲಂಘಿಸಿದವರು, ವೇದಿಕೆ ಶುದ್ಧೀಕರಿಸಿದವರ ವಿರುದ್ಧ ಕೇಸ್ ಇಲ್ಲ. ಅನ್ಯಾಯ, ಕೋಮುವಾದ, ಮನುವಾದದ ವಿರುದ್ಧ ಧ್ವನಿ ಎತ್ತುವವರನ್ನು ಕೇಂದ್ರ ಸರ್ಕಾರ ಟಾರ್ಗೆಟ್ ಮಾಡುತ್ತಿದೆ. ಪ್ರಶ್ನೆ ಕೇಳುವ ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ರಾಹುಲ್ ಗಾಂಧಿ ವಿರುದ್ಧ ಎ್ಐಆರ್ ದಾಖಲಿಸಿರುವ ಕುರಿತು ಸಚಿವ ಖರ್ಗೆ ಕಿಡಿಕಾರಿದರು.
ಬರ ಘೋಷಣೆ ಎನ್ಡಿಆರ್ಎಫ್ ನಿಯಮಾವಳಿ 2020ರಲ್ಲಿ ಎನ್ಡಿಎ ಸರ್ಕಾರ ಪರಿಷ್ಕರಿಸಿದ್ದು, ವಾಸ್ತವದಲ್ಲಿ ಬರವಿದ್ದರೂ ಬರ ಘೋಷಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ರಾಜ್ಯಗಳಿಗೆ ಸ್ವಾತಂತ್ರವಿಲ್ಲ. ಯುಪಿಎ ಅವಧಿಯಲ್ಲಿದ್ದ ಎನ್ಡಿಆರ್ಎಫ್ ನಿಯಮಾವಳಿ ಜಾರಿಗೆ ತರಬೇಕೆಂಬ ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು.