ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಜತೆಗೆ ವೀಡಿಯೋ ಕಾನ್ಫರನ್ಸ್ ಮೂಲಕ ಬುಧವಾರ ನಡೆಸಿದ ವಿಶೇಷ ಸಂವಾದ ಕಾರ್ಯಕ್ರಮ ವೀಕ್ಷಿಸುತ್ತಿರುವ ಕಲಬುರಗಿಯ ವಿವೇಕಾನಂದ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು.
- ಕಲಬುರಗಿ ವಿವಿಎನ್ ಶಾಲೆ ಮಕ್ಕಳೊಂದಿಗೆ
ಕಲಬುರಗಿ: ವಿವೇಕಾನಂದ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳೊಂದಿಗೆ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ವಿಡಿಯೋ ಕಾನ್ಫರೆನ್ಸ್ ಮೂಲಕ ಬುಧವಾರ ವಿಶೇಷ ಸಂವಾದ ನಡೆಸಿ ಬಾಹ್ಯಾಕಾಶ ತರಬೇತಿ, ಕಾರ್ಯಾನುಭವ ಹಾಗೂ ಸಂಶೋಧನೆಯ ಕುರಿತ ಅನುಭವ ಹಂಚಿಕೊಂಡರು.
ಗಂಟೆಗೆ ಸುಮಾರು 28,500 ಕಿ.ಮೀ.ವೇಗದಲ್ಲಿ ರಾಕೆಟ್ ಉಡಾವಣೆಯಾಗುತ್ತದೆ. ಈ ಸಂದರ್ಭದಲ್ಲಿ ಎದುರಾಗುವ ತೀವ್ರ ಒತ್ತಡ ಮತ್ತು ವೇಗವರ್ಧನೆ, ಸುಮಾರು 400 ಕಿಮೀ. ಎತ್ತರ ತಲುಪುವ ಪ್ರಕ್ರಿಯೆ ಕುರಿತು ಕೆಲವು ವೀಡಿಯೋ ದೃಶ್ಯಗಳ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು.
ಬಾಹ್ಯಾಕಾಶದಲ್ಲಿನ ಸೂಕ್ಷ್ಮ ಗುರುತ್ವಾಕರ್ಷಣೆಯ ಪರಿಣಾಮ ವಿವರಿಸಿದ ಅವರು, ದೇಹವು ತೇಲುವ ಅನುಭವ, ಸ್ನಾಯುಗಳ ಸಾಂದ್ರತೆಯಲ್ಲಿ ಉಂಟಾಗುವ ಬದಲಾವಣೆ, ಗಗನಯಾತ್ರಿಗಳ ಎತ್ತರದಲ್ಲಿ ಕಂಡುಬರುವ ವ್ಯತ್ಯಾಸ ಹಾಗೂ ಭೂಮಿಯ ಗುರುತ್ವಾಕರ್ಷಣೆಗೆ ಮರಳಿದ ನಂತರ ದೇಹ ಎದುರಿಸುವ ಸಮಸ್ಯೆ ಕುರಿತು ಎಳೆಎಳೆಯಾಗಿ ವಿವರಿಸಿದರು.
ಬಾಹ್ಯಾಕಾಶ ಯೋಜನೆಗಳ ಕುರಿತು ಮಾತನಾಡಿದ ಅವರು, ಭಾರತೀಯ ಅಂತರಿ ನಿಲ್ದಾಣ ನಿರ್ಮಾಣ, ಮಾನವ ಸಹಿತ ಬಾಹ್ಯಾಕಾಶ ಯಾನ ಹಾಗೂ 2040ರ ವೇಳೆಗೆ ಚಂದ್ರಯಾನದ ಮಹತ್ವಾಕಾಂಕ್ಷಿ ಯೋಜನೆ ಕುರಿತು ತಿಳಿಸಿದರು.
ವಿಫಲತೆಗಳಿಂದ ಕಲಿಯುವುದು, ಸವಾಲುಗಳನ್ನು ಧೈರ್ಯದಿಂದ ಎದುರಿಸುವುದು, ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಮತ್ತು ನಿರಂತರ ಪ್ರಯತ್ನ ಯಶಸ್ಸಿಗೆ ಪ್ರಮುಖ. ಯಶಸ್ಸು ಎನ್ನುವುದು ಒಂದೇ ದಿನದಲ್ಲಿ ದೊರೆಯುವ ಸಾಧನೆಯಲ್ಲ. ನಿರಂತರ ಪರಿಶ್ರಮ, ಆತ್ಮವಿಶ್ವಾಸ ಮತ್ತು ದೃಢಸಂಕಲ್ಪದಿಂದ ಸಾಧ್ಯ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು. ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ನಿಲ್ದಾಣದ ಚಲನೆ, ಅಲ್ಲಿಂದ ಕಾಣುವ ವೇಗದ ಸೂರ್ಯಾಸ್ತ ಸೇರಿ ತಾವು ಸೆರೆ ಹಿಡಿದ ಕೆಲ ದೃಶ್ಯಗಳನ್ನು ಪ್ರದರ್ಶಿಸಿದರು.
ಸುಮಾರು 400 ವಿದ್ಯಾರ್ಥಿಗಳು, ಶಿಕರು ಉಪಸ್ಥಿತರಿದ್ದರು. ಶಾಲೆಯ ಪ್ರಾಚಾರ್ಯ ಸಿದ್ದಪ್ಪ ಭಗವತಿ ಸ್ವಾಗತಿಸಿದರು, ನಿಖಿಲ್ ಪಾಟೀಲ್ ವಂದಿಸಿದರು.