90 ಗ್ರಾಂ ಚಿನ್ನಾಭರಣ ಪೊಲೀಸ ವಶಕ್ಕೆ
ಚಿಂತಾಮಣಿ: ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಅಂತರ ಜಿಲ್ಲಾ ಕಳ್ಳನೊಬ್ಬನನ್ನು ಕೆಂಚಾರ್ಲಹಳ್ಳಿ ಪೊಲೀಸರು ಬಂಧಿಸಿ, 90 ಗ್ರಾಂ ಚಿನ್ನದ ಒಡವೆ ಜಪ್ತಿ ಮಾಡಿದ್ದಾರೆ.
ಚೇಳೂರು ತಾಲೂಕಿನ ಕದಿರೇನಹಳ್ಳಿಯ ನಿವಾಸಿ ಕೆ.ಆರ್.ಪ್ರಶಾಂತ್ (26) ಬಂಧಿತ. ಈತ ವೃತ್ತಿಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ.
ಜು.9ರಂದು ಸಂಜೆ ಚಿಂತಾಮಣಿ ನಗರದ ನಾಮಾ ಕಿಟ್ಟಣ್ಣ ಎಂಬುವವರ ಬಂಗಾರದ ಅಂಗಡಿಯ ಮುಂಭಾಗದಲ್ಲಿ ಪ್ರಶಾಂತ್ ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಗಮನಿಸಿದ ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ 1 ವರ್ಷದ ಹಿಂದೆ ಕೋನೇಪಲ್ಲಿ ಗ್ರಾಮದ ಲ್ಮಪತಿ ಎಂಬುವವರ ಮನೆಯಲ್ಲಿ 66 ಗ್ರಾಂ ಒಡವೆ, 5 ತಿಂಗಳ ಹಿಂದೆ ಆನಪಲ್ಲಿ ಗ್ರಾಮದ ವಿನೋದಮ್ಮ ಎಂಬುವವರ ಮನೆಯಲ್ಲಿ 23 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ.
ಪ್ರಶಾಂತ್ ಚಿಕ್ಕಬಳ್ಳಾಪುರ ಜಿಲ್ಲೆಯಷ್ಟೇ ಅಲ್ಲದೆ, ಹೊಸಕೋಟೆ ಠಾಣೆ ಹಾಗೂ ಬೆಂಗಳೂರು ಕಾಮಾಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಅಂತರ ಜಿಲ್ಲಾ ಮನೆಗಳ್ಳನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಶಾಲ ಚೌಕ್ಸೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗನ್ನಾಥ್ ರೈ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೆಂಚಾರ್ಲಹಳ್ಳಿ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಜಿ.ಸಿ. ನಾರಾಯಣಸ್ವಾಮಿ, ಸಬ್ ಇನ್ಸ್ಪೆಕ್ಟರ್ ಶ್ಯಾಮಲಾ, ಶರಣಗೌಡ ಎಸ್.ಮೂಲಿಮನಿ ಮತ್ತು ಸಿಬ್ಬಂದಿ ರವಿಕುಮಾರ್, ಮುನಿಕೃಷ್ಣ, ಲೋಕೇಶ್, ಸುನಿತಾ, ಮಲ್ಲಿಕಾರ್ಜುನ ಧವಳೇಶ್ವರ ಪಾಲ್ಗೊಂಡಿದ್ದರು.