ಆನೇಕಲ್ ತಾಲೂಕು ಮರಸೂರಿನಲ್ಲಿ ಹಮ್ಮಿಕೊಂಡಿದ್ದ ಸಮಗ್ರ ಕೃಷಿ ಪದ್ಧತಿ ತರಬೇತಿ, ಚರ್ಚಾಗೋಷ್ಠಿ ಮತ್ತು ರೈತರ ಸಮಾವೇಶದಲ್ಲಿ ಎಂ.ಜೆ.ಅಂಜನ್ ಕುಮಾರ್, ಪಿಡಿಒ ಮುರಳಿ, ಪುರುಷೋತ್ತಮ ರೆಡ್ಡಿ, ಭಾರ್ಗವ ರೆಡ್ಡಿ, ಸಂಜಯ್ ಕುಮಾರ್, ಮಂಜುನಾಥಸ್ವಾಮಿ, ಸಂಪಂಗಿ ಇದ್ದರು.
ಆನೇಕಲ್ : ಸಮಗ್ರ ಕೃಷಿ ಪದ್ಧತಿ ರೈತ ಸ್ನೇಹಿಯಾಗಿದ್ದು, ಖರ್ಚು ಕನಿಷ್ಠ, ಆದಾಯ ಗರಿಷ್ಠ. ರೈತರು ಈ ಮಾದರಿಯನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು. ಇದರೊಂದಿಗೆ ಹೈನುಗಾರಿಕೆ, ಕುರಿ, ಕೋಳಿ, ಹಂದಿ, ಜೇನು ಸಾಕಣೆ, ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆದಾಯ ಹೆಚ್ಚಿಸಿಕೊಳ್ಳಬಹುದು ಎಂದು ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎಂ.ಜೆ.ಅಂಜನ್ ಕುಮಾರ್ ಹೇಳಿದರು.
ತಾಲೂಕಿನ ಮರಸೂರಿನಲ್ಲಿ ಗ್ರಾಪಂ ಮತ್ತು ಕೃಷಿ ವಿವಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಮಗ್ರ ಕೃಷಿ ಪದ್ಧತಿ ತರಬೇತಿ, ಚರ್ಚಾಗೋಷ್ಠಿ ಮತ್ತು ರೈತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.40ರಷ್ಟು ಮುಂಗಾರು ಕಡಿಮೆಯಾಗಿದೆ. ಆನೇಕಲ್ ಭಾಗದ ರೈತರು ಮಳೆಯನ್ನೇ ಅವಲಂಬಿಸಿದ್ದಾರೆ. ಸಮಗ್ರ ಕೃಷಿ ಪದ್ಧತಿ ಅನುಸರಿಸುವುದರಿಂದ ರೈತರಿಗೆ ಸುಸ್ಥಿರ ಆದಾಯ ಬರುತ್ತದೆ. ಕಸವನ್ನು ರಸವನ್ನಾಗಿ ಮಾಡುವ ಶಕ್ತಿ ಸಮಗ್ರ ಕೃಷಿ ಪದ್ಧತಿಗಿದೆ. ಇದರಿಂದ ವರ್ಷಪೂರ್ತಿ ರೈತರಿಗೆ ಕೆಲಸ ಮತ್ತು ಆದಾಯವಿರುತ್ತದೆ. ರೈತರು ರಾಸಾಯನಿಕ ಗೊಬ್ಬರ ಮತ್ತು ಉತ್ಪನ್ನಗಳ ಮೇಲಿನ ಅವಲಂಬನೆ ಕಡಿಮೆ ಮಾಡಬಹುದು ಎಂದರು.
ಮರಸೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುರಳಿ ಮಾತನಾಡಿ, ಹೈನುಗಾರಿಕೆ, ಶಿಣ, ಕೃಷಿ ಸೇರಿದಂತೆ ಗ್ರಾಮ ಪಂಚಾಯಿತಿ ಕೇವಲ ಒಂದು ವ್ಯಾಪ್ತಿಗೆ ಸೀಮಿತವಾಗದೆ ಎಲ್ಲ ವರ್ಗದ ಜನರಿಗೂ ಸಹಾಯವಾಗಬೇಕು ಎನ್ನುವ ನಿಟ್ಟಿನಲ್ಲಿ ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಜತೆ ನಿರಂತರ ಸಮಾಲೋಚಿಸಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯ ಪುರುಷೋತ್ತಮ ರೆಡ್ಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾರ್ಗವ ರೆಡ್ಡಿ, ಕೃಷಿ ವಿ.ವಿ. ಪ್ರಾಧ್ಯಾಪಕ ಸಂಜಯ್ ಕುಮಾರ್, ಮಂಜುನಾಥಸ್ವಾಮಿ, ಕರ ವಸೂಲಿಗಾರ ಸಂಪಂಗಿ ಇದ್ದರು.