ಮನರೇಗಾ ಮಹಿಳಾ ಕೂಲಿ ಕಾರ್ಮಿಕರನ್ನು ಅವಮಾನಿಸಿ ನಿಂದಿಸಿದ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮಂಗಳವಾರ ಹುಮನಾಬಾದ್​ ತಾಲೂಕು ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದರು. 
ರಾಜ್ಯ

ಮಹಿಳಾ ಕೂಲಿ ಕಾರ್ಮಿಕರಿಗೆ ಅವಮಾನ

ಪ್ರಮುಖ ಮುಖ್ಯಾಂಶಗಳು

  • ಸಹಾಯಕ ನಿರ್ದೇಶಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ
ಹುಮನಾಬಾದ್​: ಮನರೇಗಾ ಕಾಮಗಾರಿ ವೇಳೆ ಮಹಿಳಾ ಕೂಲಿ ಕಾರ್ಮಿಕರಿಗೆ ತಾಪಂ ಸಹಾಯಕ ನಿರ್ದೇಶಕ (ಮನರೇಗಾ) ಜಗನ್ನಾಥ ಅವರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಅವಮಾನ ಮಾಡಿದ್ದು ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ಮಂಗಳವಾರ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಮಹಿಳೆಯರಿಂದ ಧರಣಿ ನಡೆಸಲಾಯಿತು.
ಪ್ರವಾಸಿ ಮಂದಿರದಿಂದ ಅಂಬೇಡ್ಕರ್​ ವೃತ್ತದ ಮೂಲಕ ತಾಲೂಕು ಪಂಚಾಯಿತಿ ಕಚೇರಿವರೆಗೆ ಬೃಹತ್​ ಪ್ರತಿಭಟನೆ ನಡೆಸಿ ದಿನವಿಡೀ ಧರಣಿ ಕುಳಿತು ಅಧಿಕಾರಿ ವಿರುದ್ಧ ಘೋಷಣೆ ಕೂಗಿದರು.
ನಂತರ ಮಾತನಾಡಿದ ಪ್ರಮುಖರು, ತಾಲೂಕಿನ ಸೀತಾಳಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನರೇಗಾ ಕಾಮಗಾರಿ ವೇಳೆ ಮಹಿಳಾ ಕೂಲಿ ಕಾರ್ಮಿಕರು ಹಾಗೂ ಮೇಟಿಗಳಿಗೆ ಸಹಾಯಕ ನಿರ್ದೇಶಕರು ಅವಮಾನಿಸಿ ನಿಂದಿಸಿರುವುದು ತೀವ್ರವಾಗಿ ಖಂಡಿಸಿದರು. ಅವರ ವಿರುದ್ಧ ತಕ್ಷಣವೇ ಕ್ರಮ ಜರುಗಿಸದಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರೆಸುವುದಾಗಿ ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ತಾಪಂ ಇಒ ದೀಪಿಕಾ ನಾಯ್ಕರ್​ ಧರಣಿ ನಿರತರ ಮನವಲಿಸಿ ಘಟನೆಯ ಬಗ್ಗೆ ತನಿಖೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ ನಂತರ ಧರಣಿ ಕೈಬಿಡಲಾಯಿತು. ತಾಪಂ ಇಒ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಈಶ್ವರ ಖಂಡ್ರೆ ಅವರಿಗೆ ಬರೆದ ಮನವಿ ಸಲ್ಲಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯಕರ್ತೆ ಸಪ್ನಾದಿಪ ಭಾವಮನಿ, ಸುರೇಖಾ, ಸುಜಾತಾ, ಪ್ರೀಯಾಂಕ, ಜ್ಯೋತಿ, ಪಾರ್ವತಿ, ಪ್ರೇಮಾ ಸೇರಿ ಪಂಚಾಯತಿ ವ್ಯಾಪ್ತಿಯ ನೂರಾರು ಕೂಲಿ ಕಾರ್ಮಿಕ ಮಹಿಳೆಯರು, ವಿವಿಧ ಸಂಘಟನೆಯ ಪ್ರಮುಖರು ಇದ್ದರು.
ಧರಣಿ ಸ್ಥಳಕ್ಕೆ ಶಾಸಕರ ಭೇಟಿ: ತಾಪಂ ಕಚೇರಿ ಎದುರಿಗೆ ನಡೆದ ಧರಣಿ ಸ್ಥಳಕ್ಕೆ ಡಾ.ಸಿದ್ದಲಿಂಗಪ್ಪ ಪಾಟೀಲ್​ ಭೇಟ ನೀಡಿ, ತಪ್ಪಿಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುಲು ಮೇಲಾಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.