Ebola Virus  
ರಾಜ್ಯ

ಎಬೋಲಾ ವರದಿ ದಾಖಲಿಸಲು ಸೂಚನೆ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • * ಆರೋಗ್ಯ ಇಲಾಖೆ ಸುತ್ತೋಲೆ
ಬೆಂಗಳೂರು: ರಾಜ್ಯದಲ್ಲಿ ಶಂಕಿತ ಹಾಗೂ ಸಂಭವನೀಯ ಎಬೋಲಾ ವೈರಸ್ ಪ್ರಕರಣಗಳ ಕುರಿತ ವರದಿಯನ್ನು ಸಮಗ್ರ ಆರೋಗ್ಯ ಮಾಹಿತಿ ವೇದಿಕೆ (ಐಎಚ್‌ಐಪಿ ಪೋರ್ಟಲ್)ಯಲ್ಲಿ ತಕ್ಷಣ ದಾಖಲಿಸಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ವೈದ್ಯಕೀಯ ಕಾಲೇಜು, ಆಸ್ಪತ್ರೆಗಳು ಮತ್ತು ಇತರ ಆರೋಗ್ಯ ಸಂಸ್ಥೆಗಳು ಇಲಾಖೆ ಸೂಚಿಸಿದ ಪೋರ್ಟಲ್‌ನಲ್ಲಿ ಪ್ರಕರಣಗಳ ವರದಿ ಹಂಚಿಕೊಳ್ಳುವಂತೆ ಹಾಗೂ ಜಿಲ್ಲಾ ಕಣ್ಗಾವಲು ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ರೋಗ ಲಕ್ಷಣಗಳು ಮತ್ತು ಪ್ರಯಾಣ ಇತಿಹಾಸ ಹೊಂದಿರುವ ರೋಗಿಗಳ ತಪಾಸಣೆ ಖಚಿತಪಡಿಸಿಕೊಳ್ಳಬೇಕು. ಪೋರ್ಟಲ್‌ನಲ್ಲಿ ರೋಗಿಗಳು ಮತ್ತು ಸಂಪರ್ಕಗಳ ವಿವರ ದಾಖಲೆಗಳನ್ನು ನಿರ್ವಹಿಸಿ ಜಿಲ್ಲಾ ಕಣ್ಗಾವಲು ಘಟಕದಿಂದ ಸಾಂಕ್ರಾಮಿಕ ರೋಗಶಾಸೀಯ ಪರೀಕ್ಷೆ ನಡೆಸಲು ಹಾದಿ ಸುಗಮಗೊಳಿಸಬೇಕು. ಶಂಕಿತ ಪ್ರಕರಣಗಳನ್ನು ಪ್ರತ್ಯೇಕಿಸುವ ಮತ್ತು ಸೂಕ್ತವಾದ ವೈಯಕ್ತಿಕ ರಕ್ಷಣಾ ಸಾಧನಗಳ ಬಳಕೆ ಸೇರಿ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.
ಎಬೋಲಾ ಲಕ್ಷಣವಿದ್ದು ಮೃತಪಟ್ಟರೆ, ಒಸಡು, ಮೂಗಿನಿಂದ ರಕ್ತಸ್ರಾವ, ದೇಹದ ಮೇಲೆ ಕೆಂಪು ಕಲೆಗಳು, ರಕ್ತಸಿಕ್ತ ಮಲ, ರಕ್ತ ವಾಂತಿ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಕಳೆದ 21 ದಿನಗಳಲ್ಲಿ ದೃಢಪಡಿಸಿದ ಪ್ರಕರಣದೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಪ್ರಕರಣ ಪತ್ತೆ ಮಾಡಬೇಕು. ಒಂದೇ ಕೊಠಡಿ, ಹಾಸಿಗೆ ಹಂಚಿಕೊಂಡಿರುವುದು, ರೋಗಿಯನ್ನು ನೋಡಿಕೊಳ್ಳುವುದು, ದೇಹದ ದ್ರವಗಳನ್ನು ಮುಟ್ಟುವುದು ಅಥವಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರುವುದರ ಬಗ್ಗೆ ತನಿಖೆ ನಡೆಸಬೇಕು ಎಂದು ತಿಳಿಸಿದೆ.