ಶಾಲಾ ಅವಧಿಯಲ್ಲಿ ಮಕ್ಕಳ ಆಟದ ಸಮಯ
- ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಲಿತಾಂಶ ನೀಡುವ ಉದ್ದೇಶದಿಂದ 10ನೇ ತರಗತಿ ಮಕ್ಕಳ ಆಟದ ಸಮಯವನ್ನು ಕಡಿತ
- 10ನೇ ತರಗತಿ ಮಕ್ಕಳ ಆಟದ ಸಮಯವನ್ನು ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಿಕ್ಷಣ ಇಲಾಖೆಗೆ ಪತ್ರ ಬರೆದಿತ್ತು
- ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿ ಸೂಚನೆ ನೀಡಿದೆ.
ಬೆಂಗಳೂರು: ಶಾಲಾ ಸಮಯದಲ್ಲಿ ಮಕ್ಕಳಿಗೆ ಆಟದ ಅವಧಿಯನ್ನು ಕಡಿತಗೊಳಿಸದಂತೆ ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಸೂಚನೆ ನೀಡಿದೆ.
ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಲಿತಾಂಶ ನೀಡುವ ಉದ್ದೇಶದಿಂದ 10ನೇ ತರಗತಿ ಮಕ್ಕಳ ಆಟದ ಸಮಯವನ್ನು ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಿಕ್ಷಣ ಇಲಾಖೆಗೆ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆಯು ಆದೇಶ ಹೊರಡಿಸಿ ಸೂಚನೆ ನೀಡಿದೆ.
ಆಟ, ಕಲೆ ಮತ್ತು ಇನ್ನಿತರ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸಮಗ್ರ ವೈಯಕ್ತಿಕ ವಿಕಾಸದ ಅವಿಭಾಜ್ಯ ಅಂಗವಾಗಿದ್ದು, ಇದನ್ನು ಮನಗಂಡು ವಿಶ್ವಸಂಸ್ಥೆಯು ಜೂ.11ರಂದು ಪ್ರತಿ ವರ್ಷ ಅಂತಾರಾಷ್ಟ್ರೀಯ ಆಟದ ದಿನವೆಂದು ಗುರುತಿಸಿದೆ. 10ನೇ ತರಗತಿಯ ಪರೀಕ್ಷೆಯಲ್ಲಿ ಶಾಲಾ ಉತ್ತಮ ಲಿತಾಂಶ ಗಳಿಸಬೇಕೆಂಬ ಕಾರಣದಿಂದ ಮಕ್ಕಳ ಆಟಗಳನ್ನು ನಿರ್ಬಂಧಿಸುತ್ತಿರುವುದು ವಿಪರ್ಯಾಸದ ಸಂಗತಿ. ಇದು ಮಕ್ಕಳ ಕಲಿಕೆಯ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ.
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪ್ರಕಾರ, ಆಟ ಮಕ್ಕಳ ಹಕ್ಕು ಅದನ್ನು ನಿರ್ಬಂಧಿಸುವುದು ಹಕ್ಕಿನ ಉಲ್ಲಂಘಣೆಯಾಗುತ್ತದೆ. ಅದನ್ನು ತಡೆಗಟ್ಟುವ ಬಗ್ಗೆ ಸಂಬಂಧಪಟ್ಟವರಿಗೆ ಶಾಲಾ ವೇಳಾಪಟ್ಟಿಯಂತೆ ಆಟದ ಅವಧಿಯನ್ನು ಕಡ್ಡಾಯವಾಗಿ ನಡೆಸಲು ಸೂಕ್ತ ನಿರ್ದೇಶನ ನೀಡಬೇಖು. ವೇಳಾಪಟ್ಟಿಯಲ್ಲಿ ನಿಗದಿಪಡಿಸಿದ ದೈಹಿಕ ಶಿಕ್ಷಣದ ಸಮಯವನ್ನು ಕಡ್ಡಾಯವಾಗಿ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕ್ರಮ ವಹಿಸಲು ರಾಜ್ಯದ ಎಲ್ಲ ಡಿಡಿಪಿಐಗಳಿಗೆ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ವಿಭಾಗದ ಸಹ ನಿರ್ದೇಶಕರು ತಿಳಿಸಿದ್ದಾರೆ.