ನಾಪೋಕ್ಲುವಿನಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತಿಯಲ್ಲಿ ಜಾಜಿ ಮೋಹನ್ ಮಾತನಾಡಿದರು. ಬಿ.ಜಿ.ಧನಂಜಯ, ವಸಂತ, ಜಗನ್ನಾಥ,ಬಿ.ಬಿ.ವಿಠಲ್, ಬಿ.ಡಿ.ದೀಪಕ್ ಇದ್ದರು.  
ರಾಜ್ಯ

ಮಕ್ಕಳಲ್ಲಿ ಸಮಾಜಸೇವಾ ಮನೋಭಾವ ಬೆಳೆಸಿ

ಪ್ರಮುಖ ಮುಖ್ಯಾಂಶಗಳು

  • ಬಿಲ್ಲವ ಸಮಾಜ
  • ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ
ನಾಪೋಕ್ಲು: ಬಿಲ್ಲವ ಸಮಾಜ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು ಸಂಘದ ನಿವೇಶನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ಶಿಕ್ಷಕರಿಗೆ ಗುರು ನಮನ ಸಲ್ಲಿಸಲಾಯಿತು. ಚೆನ್ನಯನಕೋಟೆ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಜಾಜಿ ಮೋಹನ್ ಮಾತನಾಡಿ, ಮಕ್ಕಳಲ್ಲಿ ಸಮಾಜಸೇವೆಯ ಮನೋಭಾವ ಬೆಳೆಸಬೇಕು. ನಾರಾಯಣಗುರುಗಳ ಸಮಾನತೆ ಮತ್ತು ಮಾನವೀಯತೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬ ಮಗುವಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿ. ಸೋಲು-ಗೆಲುವು ಜೀವನದ ಭಾಗ ವಾಗಿದ್ದು, ಯಾವುದೇ ಕ್ಷೇತ್ರದಲ್ಲೂ ಹಿಂದೆ ಬೀಳಬಾರದು ಎಂದು ಸಲಹೆ ನೀಡಿದರು.
ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್ ಮಾತನಾಡಿ, ಸುಮಾರು 134 ಕುಟುಂಬಗಳು ಒಂದಾಗಿ ಶಿಕ್ಷಣದ ಮಹತ್ವವನ್ನು ಸಾರುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಸಮಾಜದಿಂದ ಮಕ್ಕಳಿಗಾಗಿ ಇನ್ನಷ್ಟು ಶೈಕ್ಷಣಿಕ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು ಆಯೋಜನೆಯಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಬಿಲ್ಲವ ಸಮಾಜದ ನಾಪೋಕ್ಲು ಅಧ್ಯಕ್ಷ ಬಿ.ಎಂ.ಪ್ರತೀಪ್ ಮಾತನಾಡಿ, ಸಮಾಜದ ಸ್ವಂತ ಜಾಗದಲ್ಲಿ ಜಯಂತಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಬಿಲ್ಲವ ಸಮಾಜದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸು ಸಾಧಿಸಿ ಉನ್ನತ ಹುದ್ದೆ ಅಲಂಕರಿಸಬೇಕು ಎಂದರು.
ಶಿಕ್ಷಕರಾದ ಪುಷ್ಪಾವತಿ ಧನಂಜಯ, ಸಾವಿತ್ರಿ ವಿಠಲ್, ಹೇಮಾಮಾಲಿನಿ, ರಶ್ಮಿ, ಬಿ.ಎಸ್.ಕಿಶೋರ್, ಕು.ಹೇಮಾವತಿ ಹಾಗೂ ಕೆ.ಬಿ. ಸರಸ್ವತಿ ಅವರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಶಿಕ್ಷಕರು, ನಾರಾಯಣಗುರುಗಳ ತತ್ವ-ಸಿದ್ಧಾಂತ, ವೃತ್ತಿಜೀವನದ ಅನುಭವ, ಶಿಕ್ಷಣದ ಮಹತ್ವ ಹಾಗೂ ಪಾಲಕರ ಋಣವನ್ನು ಎಂದಿಗೂ ಮರೆಯಬಾರದು ಎಂಬ ಸಂದೇಶವನ್ನು ಹಂಚಿಕೊಂಡರು.
ಸಂಘದ ನಿರ್ದೇಶಕರಾದ ಬಿ.ಜಿ. ಧನಂಜಯ ಮಾತನಾಡಿದರು. ಕಾರ್ಯಕ್ರಮದ ಬಳಿಕ ಸದಸ್ಯರು ಹಾಗೂ ಮಕ್ಕಳಿಗಾಗಿ ಮನೋರಂಜನಾ ಕ್ರೀಡಾಕೂಟ ಆಯೋಜಿಸಲಾಗಿತ್ತು. ಬಿಲ್ಲವ ಸಮಾಜ ನಾಪೋಕ್ಲು ಉಪಾಧ್ಯಕ್ಷರಾದ ವಸಂತ, ಜಗನ್ನಾಥ, ಕೊಡಗು ಜಿಲ್ಲಾ ಬಿಲ್ಲವ ಸಮಾಜ ಒಕ್ಕೂಟದ ಉಪಾಧ್ಯಕ್ಷ ಬಿ.ಬಿ.ವಿಠಲ್, ಸಂಘದ ಖಜಾಂಚಿ ಬಿ.ಡಿ.ದೀಪಕ್, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಲೋಹಿತ್ ಇದ್ದರು.