ಶಾಸಕರ ಭವನ 
ರಾಜ್ಯ

ಶಾಸಕರ ಕೊಠಡಿಗಳಿಗೆ ಸ್ಮಾರ್ಟ್ ಡೋರ್ ಲಾಕ್ ಉಪಕರಣ ಅಳವಡಿಕೆಗೆ 1.09 ಕೋಟಿ ವೆಚ್ಚ

ಬೆಂಗಳೂರು: ಭದ್ರತೆ, ಸುರಕ್ಷತೆ ದೃಷ್ಟಿಯಿಂದ ವಿಧಾನಸೌಧ ಸಮೀಪದ ಶಾಸಕರ ಭವನದ ಶಾಸಕರ ಕೊಠಡಿಗಳಿಗೆ ಸ್ಮಾರ್ಟ್ ಡೋರ್ ಲಾಕ್ ಉಪಕರಣ ಅಳವಡಿಕೆಗೆ ಬರೋಬ್ಬರಿ 1.09 ಕೋಟಿ ರೂ. ಖರ್ಚಾಗಿದೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಯಲ್ಲಿ(ಕೆಟಿಪಿಪಿ) 4ಜಿ ವಿನಾಯಿತಿ ಅಡಿ ಆರ್ಥಿಕ ಇಲಾಖೆ ಅನುಮೋದನೆಯೊಂದಿಗೆ ಮಂಗಳೂರು ಮೂಲದ ಮೆ:ಆಸ್ಕೀನ್ ಆಟೋಮೇಷನ್ ಪ್ರೈ.ಲಿ.ನಿಂದ ನೇರವಾಗಿ ಖರೀದಿಸಿ ಶಾಸಕರ ಕೊಠಡಿಗಳಿಗೆ ಸ್ಮಾರ್ಟ್ ಡೋರ್ ಲಾಕ್ ಅಳವಡಿಸಲಾಗಿದೆ. ಟೆಂಡರ್ ನಡೆಸದೆ 4ಜಿ ವಿನಾಯಿತಿ ಅಡಿ ನೇರವಾಗಿ ಕಂಪನಿ ಮೂಲಕ 1.09 ಕೋಟಿ ರೂ.ವೆಚ್ಚದಲ್ಲಿ ಸ್ಮಾರ್ಟ್ ಡೋರ್ ಲಾಕ್ ಖರೀದಿಸಿರುವುದು ಮಾಹಿತಿ ಹಕ್ಕಿನಲ್ಲಿ ಬಹಿರಂಗವಾಗಿದೆ.
ಯಂತ್ರೋಪಕರಣ, ಸಲಕರಣೆಗಳು, ಪೀಠೋಪಕರಣ ಸೇರಿ ಇತರ ಸಾಮಗ್ರಿ ಖರೀದಿಸಲು ಅಥವಾ ಟೆಂಡರ್ ಮೌಲ್ಯ ಒಂದು ಲಕ್ಷ ರೂ.ದಾಟಿದರೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಅನ್ವಯ ಟೆಂಡರ್ ನಡೆಸಿ ಫೈನಾನ್ಸಿಯಲ್ ಬಿಡ್‌ನಲ್ಲಿ ಕಡಿಮೆ ಬಿಡ್ ಮಾಡಿ ಎಲ್-1 ಪಡೆದ ಕಂಪನಿಗೆ ಕಾರ್ಯಾದೇಶ ಪತ್ರ ನೀಡಬೇಕು. ತುರ್ತು ಪರಿಸ್ಥಿತಿಯಲ್ಲಿ ಅತಿ ಅವಶ್ಯಕತೆ ಇದ್ದಾಗ, ಸತತವಾಗಿ ಟೆಂಡರ್ ವಿಳಂಬವಾದರೆ ಮಾತ್ರವೇ ಕೋಟೇಷನ್ ಮೂಲಕ 1 ಲಕ್ಷ ರೂ. ಒಳಗಿನ ಟೆಂಡರ್ ಖರೀದಿಸಲು ಅವಕಾಶ ಇದೆ. ಆದರೆ, ಕೆಟಿಪಿಪಿ ಕಾಯ್ದೆಯಲ್ಲಿ 4ಜಿ ವಿನಾಯಿತಿ ಪಡೆದು ಸ್ಮಾರ್ಟ್ ಡೋರ್ ಲಾಕ್ ಖರೀದಿಸಲು ಅವಕಾಶ ನೀಡಿರುವುದು ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ.
ರಿಕ್ಲೇನರ್ ಸೋಫಾಗೆ 10.20 ಲಕ್ಷ ರೂ.ವ್ಯಯ:
ವಿಧಾನಸಭಾ ಸದಸ್ಯರಿಗೆ ಉಳಿದುಕೊಳ್ಳಲು ಶಾಸಕರ ಭವನ-2ರಿಂದ ಶಾಸಕರ ಭವನ-4ರವರೆಗಿನ 3 ಕಟ್ಟಡಗಳಲ್ಲಿ ವಸತಿ ಸೌಕರ್ಯ ಕಲ್ಪಿಸಲಾಗಿದೆ. ಈ ಕಟ್ಟಡಗಳು ವಿಧಾನಸಭಾ ಸಚಿವಾಲಯದ ನಿಯಂತ್ರಣದಲ್ಲಿವೆ.ವಿಧಾನಸೌಧದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಂಗಣಕ್ಕೆ 15 ರಿಕ್ಲೇನರ್ ಸೋಫಾ ಅಳವಡಿಸಲು 10.20 ಲಕ್ಷ ರೂ.ವ್ಯಯಿಸಲಾಗಿದೆ. ಪ್ರತಿ ರಿಕ್ಲೇನರ್ ಸೋಫಾಗೆ 68 ಸಾವಿರ ರೂ.ನಂತೆ 15 ರಿಕ್ಲೇನರ್ ಖರೀದಿಸಲಾಗಿದೆ. ಅಧಿವೇಶನ ಸಂದರ್ಭದಲ್ಲಿ ಮಾತ್ರ ಕೆಲ ಶಾಸಕರು ಮತ್ತು ವಿಧಾನಪರಿಷತ್ತಿನ ಸದಸ್ಯರು ರಿಕ್ಲೇನರ್ ಸೋಫಾದಲ್ಲಿ ಕುಳಿತುಕೊಳ್ಳುತ್ತಾರೆ. ಉಳಿದ ಸಂದರ್ಭದಲ್ಲಿ ಇದು ಖಾಲಿ ಇರುತ್ತದೆ.
ಆರೋಪ ಮಾಡಿದ್ದ ಸಂಸದ:
ಶಾಸಕರ ಭವನಕ್ಕೆ ಮಂಚ, ಟೇಬಲ್, ಸೇಫ್​​​ ಲಾಕರ್, ಡೋರ್ ಲಾಕರ್, ಹಾಸು ಹೊದಿಕೆ, ಕಾರ್ಪೆಟ್, ಸುಣ್ಣ-ಬಣ್ಣ ಮತ್ತು ಮಸಾಜ್ ಪಾರ್ಲರ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, 2 ತಿಂಗಳು ಹಿಂದೆಯಷ್ಟೇ ಆರೋಪಿಸಿದ್ದರು. ವಿಧಾನಸಭಾಧ್ಯಕ್ಷರ ಕಾರ್ಯಾಲಯದ ಎಲ್ಲ ಟೆಂಡರ್‌ಗಳು ಮಂಗಳೂರು ಮೂಲದವರಿಗೆ ಸಿಗುತ್ತಿದೆ. ಹಲವು ಖರೀದಿ ಟೆಂಡರ್‌ಗಳನ್ನು ಆರ್ಥಿಕ ಇಲಾಖೆ ತಿರಸ್ಕರಿಸಿತ್ತು. ಆದರೂ, ದುಂದುವೆಚ್ಚ ವ್ಯಯಿಸಿ ಸಾಮಗ್ರಿ ಖರೀದಿಸಲಾಗಿದೆ. ವಿಧಾನಸೌಧ ಸಭಾಂಗಣಕ್ಕೆ ಹೊಸ ಟಿವಿ ಸೆಟ್ ಅಳವಡಿಸಿದ್ದರೂ ಎಐ ಮಾನಿಟರ್ ಹಾಕಲು ದುಬಾರಿ ಮೊತ್ತ ಖರ್ಚು ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.