ಅರಕಲಗೂಡು ತಾಲೂಕಿನ ಕಾಳೇನಹಳ್ಳಿ ಗ್ರಾಮಕ್ಕೆ ಕರೆತರಲು ಗೌರಮ್ಮನನ್ನು ಅಡ್ಡಮೇಲೆ ಕೂರಿಸಿ ಅಲಂಕರಿಸಿರುವುದು. 
ರಾಜ್ಯ

ಕಾಳೇನಹಳ್ಳಿಯಲ್ಲಿ ಗೌರಮ್ಮ ದೇವಿ ಪ್ರತಿಷ್ಠಾಪನೆ

ಪ್ರಮುಖ ಮುಖ್ಯಾಂಶಗಳು

  • ಕಾಳೇನಹಳ್ಳಿ ಗ್ರಾಮ
  • ಶ್ರೀ ಗೌರಮ್ಮ ದೇವತೆ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ
ಅರಕಲಗೂಡು: ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಗೌರಿ ಹಬ್ಬದ ಅಂಗವಾಗಿ ಶ್ರೀ ಗೌರಮ್ಮ ದೇವತೆ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಸಂಭ್ರಮದಿಂದ ನಡೆಯಿತು.
ಬಸವನಹಳ್ಳಿ ಸಮೀಪ ಕಾವೇರಿ ನದಿಯಲ್ಲಿ ಕಡಲೆಹಿಟ್ಟಿನಿಂದ ವಿಶೇಷವಾಗಿ ತಯಾರಿಸಿದ ಗೌರಮ್ಮನ ವಿಗ್ರಹಕ್ಕೆ ಅಲಂಕಾರ ಮಾಡಲಾಯಿತು. ಬಳಿಕ ಗಂಗೆಯಲ್ಲಿ ಸಂಪ್ರೋಕ್ಷಣೆ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಬಸವನಹಳ್ಳಿ, ಕೇರಳಾಪುರ, ಹೊನ್ನೇನಹಳ್ಳಿ ಮಾರ್ಗವಾಗಿ ಮಂಗಳವಾದ್ಯಗಳೊಂದಿಗೆ ಉತ್ಸವ ಅಡ್ಡಮೇಲೆ ಹೊತ್ತು ಗೌರಮ್ಮನ ಮೂರ್ತಿಯನ್ನು ಕಾಳೇನಹಳ್ಳಿಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು.
ಗ್ರಾಮದಲ್ಲಿ ಮೆರವಣಿಗೆ ನಡೆಸಿದ ಬಳಿಕ ಗೌರಮ್ಮನ ಮೂರ್ತಿಯನ್ನು ಈಶ್ವರ ದೇವಸ್ಥಾನದಲ್ಲಿ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಗೌರಮ್ಮನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಗೌರಮ್ಮನಿಗೆ ಒಂದು ತಿಂಗಳ ಕಾಲ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತದೆ. ಬಳಿಕ ದೊಡ್ಡಕೆರೆಗೆ ತೆಪ್ಪೋತ್ಸವದ ಮೂಲಕ ಗೌರಮ್ಮನ ಮೂರ್ತಿಯ ವಿಸರ್ಜನೆ ನೆರವೇರಿಸುವುದು ಇಲ್ಲಿನ ಸಂಪ್ರದಾಯವಾಗಿದೆ. ಗೌರಿ ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿದ್ದು, ಮಹಿಳೆಯರು ಸೇರಿದಂತೆ ನೂರಾರು ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.