ಎನ್‌ಇಬಿ ಸ್ಪೋರ್ಟ್ಸ್ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ನಾಗರಾಜ ಅಡಿಗ,ಪ್ರಾಜೆಕ್ಟ್ ಮ್ಯಾನೇಜರ್ ದಾರಾ ರೀತ್ ಹಾಗೂ ಇತರರು 
ರಾಜ್ಯ

ಸಾಂಸ್ಕೃತಿಕ ನಗರಿಯಲ್ಲಿ ಅ.8ಕ್ಕೆ ಲ ಟೇಪ್ ಮೈಸೂರು ಸೈಕ್ಲಿಂಗ್ ಸ್ಪರ್ಧೆ

ಬೆಂಗಳೂರು: ಟೂರ್ ಡಿ ಫ್ರಾನ್ಸ್‌ ರೇಸ್​ನಿಂದ ಸ್ಫೂರ್ತಿ ಪಡೆದು ಭಾರತದಲ್ಲೂ ವಿಶ್ವ ದರ್ಜೆಯ ಸೈಕ್ಲಿಂಗ್ ಸ್ಪರ್ಧೆಯೂ ಆಯೋಜಿಸಲು ಎನ್‌ಇಬಿ ಸ್ಪೋರ್ಟ್ಸ್ ಸಂಸ್ಥೆಯು ಮುಂದಾಗಿದ್ದು, ಶುಕ್ರವಾರ ಅಧಿಕೃತ ಲೋಗೋ ಹಾಗೂ ವೆಬ್‌ಸೈಟ್ ಲೋಕಾರ್ಪಣೆ ಮಾಡಿತು. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ‘ಲ ಟೇಪ್ ಮೈಸೂರು’ ಅಕ್ಟೋಬರ್ 4ಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೈಕ್ಲಿಂಗ್ ಸ್ಪರ್ಧೆ ನಡೆಯಲಿದೆ. ಲ ಟೇಪ್ ಮೈಸೂರು ಸ್ಪರ್ಧೆಯು ಟೂರ್ ಡಿ ಫ್ರಾನ್ಸ್ ಸರಣಿಯಲ್ಲಿ ನಡೆಯುವ ಜಾಗತಿಕ ಲ ಟೇಪ್ ಸ್ಪರ್ಧೆಯ ಭಾಗವಾಗಿದೆ. ಸ್ಪರ್ಧೆಯು ವೃತ್ತಿಪರ ಸೈಕ್ಲಿಂಸ್ಟ್‌ಗಳಿಗೆ (100ಕಿ.ಮೀ), ಫಿಟ್ನೆಸ್ ಆಸಕ್ತರಿಗೆ (50 ಕಿ.ಮೀ), ಮುಕ್ತ ವಿಭಾಗದಲ್ಲಿ ಫ್ಯಾಮಿಲಿ ಫನ್ ರೈಡ್ (20 ಕಿ.ಮೀ),ಮಕ್ಕಳಿಗೆ (1 ಕಿ.ಮೀ) ಸಹಿತ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ಮೈಸೂರು ಮತ್ತು ಕೆಆರ್‌ಎಸ್ ಪ್ರದೇಶದ ವಿಸ್ತಾರವಾದ ರಸ್ತೆ, ಪಾರಂಪರಿಕ ಕಟ್ಟಡಗಳ ನಡುವೆ ರೇಸ್ ಸಾಗಲಿದ್ದು, 
ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಪರ್ಧಿಗಳು  ಹೆಸರು ನೋಂದಾಯಿಸಿಕೊಂಡು ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಸೈಕ್ಲಿಂಗ್‌ನ ಮಾರ್ಗ, ತರಬೇತಿಯ ವಿವರ ಹಾಗೂ ಸ್ಪರ್ಧೆಯ ಕುರಿತ ಅಪ್‌ಡೇಟ್‌ಗಳು ನೋಂದಾಯಿಸಿಕೊಂಡವರಿಗೆ ಲಭಿಸಲಿವೆ ಎಂದು ಆಯೋಜಕರು ತಿಳಿಸಿದ್ದಾರೆ. 
ಎನ್‌ಇಬಿ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ನಾಗರಾಜ ಅಡಿಗ, ‘ಎನ್‌ಇಬಿ ಸ್ಪೋರ್ಟ್ಸ್ಗೆ ಇದು ಕೇವಲ ಸೈಕ್ಲಿಂಗ್ ಸ್ಪರ್ಧೆಯಲ್ಲ. ಜಾಗತಿಕ ಕ್ರೀಡಾ ನಕ್ಷೆಯಲ್ಲಿ ಭಾರತವನ್ನು ಇರಿಸುವ ಹೆಮ್ಮೆಯ ಅವಕಾಶವಿದು. ಅದರಲ್ಲೂ, ಪರಂಪರೆ, ಸಂಸ್ಕ5ಪತಿ ಮತ್ತು ಸುಂದರ ಅರಮನೆಗಳ ನಗರವಾಗಿರುವ ಮೈಸೂರಿನಂತಹ ತಾಣಕ್ಕೆ ಟೂರ್ ಡಿ ಫ್ರಾನ್ಸ್ನ ಎಲ್‘ಎಟೇಪ್‌ನಂತ ಪ್ರತಿಷ್ಠಿತ ಸ್ಪರ್ಧೆಯನ್ನು ಪರಿಚಯಿಸುತ್ತಿರುವುದು ಸಂತಸ ತಂದಿದೆ. ಫಿಟ್‌ನೆಸ್, ಪ್ರವಾಸೋದ್ಯಮ ಹಾಗೂ ಸಮುದಾಯ ಸಹಭಾಗಿತ್ವದ ಆಸಕ್ತರಿಗಾಗಿ ಜಾಗತಿಕ ದರ್ಜೆಯ ಕ್ರೀಡಾ ಅನುಭವವನ್ನು ನೀಡಲು ನಾವು ಸಿದ್ಧರಾಗಿದ್ದೇವೆ. ಇದು ಭಾರತದ ಶ್ರೇಷ್ಠ ಕ್ರೀಡಾಕೂಟಗಳಲ್ಲಿ ಒಂದಾಗಲಿದೆ ಎಂದು ಹೇಳಿದರು.
ಟೂರ್ ಡಿ ಫ್ರಾನ್ಸ್‌ ಸ್ಪರ್ಧೆಗಳನ್ನು ಆಯೋಜಿಸುವ ಆಮ್ಯುವರಿ ಸ್ಪೋರ್ಟ್ಸ್ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ದಾರಾ ರೀತ್ ಯುವೈ ಮಾತನಾಡಿ, ‘ಟೂರ್ ಡಿ ಫ್ರಾನ್ಸ್ನಲ ಟೇಪ್ ಸ್ಪರ್ಧೆಯು ಜಗತ್ತಿನ ಶ್ರೇಷ್ಠ ಸೈಕ್ಲಿಂಗ್ ರೇಸ್‌ನ ಸ್ಪೂರ್ತಿ ಹಾಗೂ ಕ್ರೀಡಾಪ್ರೇಮವನ್ನು ಒಳಗೊಂಡಿದೆ. ಮೈಸೂರಿನಲ್ಲಿ ಸುಂದರ ಮಾರ್ಗಗಳು, ಉತ್ತಮ ರಸ್ತೆಗಳು ಹಾಗೂ ಶ್ರೇಷ್ಠ ಸಾಂಸ್ಕೃತಿಕ ಶ್ರೀಮಂತಿಕೆಯಿದೆ. ಟೂರ್ ಡಿ ಫ್ರಾನ್ಸ್‌ ಅದ್ಭುತವಾದ ಅನುಭವಗಳನ್ನು ಕರ್ನಾಟಕದಲ್ಲಿ ಒದಗಿಸಲು ನಾವು ಕಾತುರರಾಗಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ‘ಕರ್ನಾಟಕ ಸರ್ಕಾರವು ಕ್ರೀಡಾ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬದ್ಧವಾಗಿದೆ. ಅದರಲ್ಲೂ ಮೈಸೂರನ್ನು ಜಾಗತಿಕ ಕ್ರೀಡಾ ನಕ್ಷೆಯಲ್ಲಿ ಇರಿಸಲು ನಮಗೆ ಸಂತೋಷವಾಗುತ್ತಿದೆ. ಎಲ್ಎಟೇಪ್ ಮೈಸೂರು ಕ್ರೀಡಾಕೂಟವು ನಮ್ಮ ರಾಜ್ಯದ ಸೌಂದರ್ಯ, ಆತಿಥ್ಯ ಹಾಗೂ ಮೂಲಸೌಕರ್ಯಗಳನ್ನು ಭಾರತ ಮತ್ತು ಜಾಗತಿಕ ವೇದಿಕೆಯಲ್ಲಿ ಶೋಕೇಸ್ ಮಾಡಲಿದೆ. ಆರೋಗ್ಯಕರ ಜೀವನ, ಸುಸ್ಥಿರತೆ ಹಾಗೂ ಜಾಗತಿಕ ಸಹಭಾಗಿತ್ವವನ್ನು ಉತ್ತೇಜಿಸುವ ಕಾರ್ಯಕ್ರಮದಲ್ಲಿ ಕೈಜೋಡಿಸಿರುವುದಕ್ಕೆ ನಮಗೆ ಹೆಮ್ಮೆಯಿದೆ ಎಂದು ಮಾಹಿತಿ ನೀಡಿದರು.
120 ವರ್ಷಗಳ ಇತಿಹಾಸವಿರುವ ಟೂರ್ ಡಿ ಫ್ರಾನ್ಸ್
1903ರಲ್ಲಿ ಫ್ರಾನ್ಸ್‌ನ ಕ್ರೀಡಾ ಪತ್ರಕರ್ತ ಜಿಯೋ ಲೆಫೆವ್ರೆ ಎಂಬುವರು ಕುಸಿಯುತ್ತಿದ್ದ ತಮ್ಮ ಎಲ್ಆಟೋ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಿಕೊಳ್ಳಲು ಮೊದಲ ಬಾರಿ ಟೂರ್ ಡಿ ಫ್ರಾನ್ಸ್ ಹೆಸರಿನ ಸ್ಪರ್ಧೆಯನ್ನು ಫ್ರಾನ್ಸ್ನಲ್ಲಿ ಆಯೋಜಿಸಿದ್ದರು. ಈಗ ಅದು 120 ವರ್ಷಗಳನ್ನು ದಾಟಿ ಜಗತ್ತಿನಲ್ಲೇ ಅತಿಹೆಚ್ಚು ವೀಕ್ಷಕರನ್ನು ಹೊಂದಿರುವ ಸೈಕ್ಲಿಂಗ್ ಸ್ಪರ್ಧೆಯಾಗಿ ಬೆಳೆದಿದೆ. ಮೊದಲ ಸ್ಪರ್ಧೆಯಲ್ಲಿ 60 ಫ್ರೆಂಚ್ ನಾಗರಿಕರು, ಕೆಲವು ಬೆಲ್ಜಿಯಂ ನಾಗರಿಕರು ಹಾಗೂ ಸ್ವಿಸ್, ಜರ್ಮನ್ ಮತ್ತು ಇಟಾಲಿಯನ್ ಜನರು ಪಾಲ್ಗೊಂಡಿದ್ದರು. ಆರು ಹಂತಗಳಲ್ಲಿ ಫ್ರಾನ್ಸ್‌ ಉದ್ದಗಲಕ್ಕೂ 2,428 ಕಿಮೀ ದೂರ ಸೈಕ್ಲಿಂಗ್ ರೇಸ್ ನಡೆಸಲಾಗಿತ್ತು. ವೃತ್ತಿಪರ ಸೈಕ್ಲಿಸ್ಟ್ ಮೌರೀಸ್ ಗರೀನ್ ಅವರು ಜಯ ಗಳಿಸಿ 3000 ಫ್ರಾಂಕ್ ಮೊತ್ತದ ಬಹುಮಾನ ಪಡೆದಿದ್ದರು.
1915ರಿಂದ 1918 ಹಾಗೂ 1940ರಿಂದ 1946ರ ನಡುವೆ ವಿಶ್ವ ಮಹಾಯುದ್ಧಗಳ ಅವಧಿಯಲ್ಲಿ ಸ್ಪರ್ಧೆ ನಡೆಯಲಿಲ್ಲ. ಇನ್ನುಳಿದ ಎಲ್ಲಾ ವರ್ಷಗಳಲ್ಲೂ ಸ್ಪರ್ಧೆ ನಡೆದಿದೆ. ಎಡಿ ಮರ್ಕ್ಸ್, ಬರ್ನಾರ್ಡ್ ಹಿನಾಲ್ಟ್, ಮೈಗೂಯೆಲ್ ಇಂಡೂರೇನ್, ತಡೇಜ್ ಪೊಗಾಸರ್ ಮುಂತಾದ ಸೈಕ್ಲಿಂಗ್ ದಂತಕತೆಗಳನ್ನು ಈ ಸ್ಪರ್ಧೆಯು ಹುಟ್ಟುಹಾಕಿದೆ. 90ಕ್ಕೂ ಹೆಚ್ಚು ದೇಶಗಳ ರೈಡರ್‌ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿ ವರ್ಷ ಜುಲೈ ತಿಂಗಳಲ್ಲಿ 21 ಹಂತಗಳಲ್ಲಿ 3,400 ಕಿಮೀ ದೂರದ ರೇಸ್ ನಡೆಯುತ್ತದೆ. ಬೆಟ್ಟ ಗುಡ್ಡಗಳು, ಕಣಿವೆಗಳು, ರಸ್ತೆ, ಹಳ್ಳಿಯ ಓಣಿಗಳು ಮುಂತಾದ ಕಡೆ ಸೈಕ್ಲಿಸ್ಟ್ಗಳು ಉತ್ಸಾಹದಿಂದ ಸೈಕಲ್ ಓಡಿಸುವುದನ್ನು ಜನರು ಮಾರ್ಗದ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸುತ್ತಾರೆ. ಇದು ಕೇವಲ ಸೈಕ್ಲಿಂಗ್ ಸ್ಪರ್ಧೆಯಾಗಿ ಉಳಿಯದೆ, ಜನರನ್ನು ಒಗ್ಗೂಡಿಸುವ ಹಾಗೂ ಆಕಾಂಕ್ಷೆಗಳ ಪರಿಧಿಯನ್ನು ವಿಸ್ತರಿಸುವ, ಅಸಾಧ್ಯಗಳನ್ನು ಸಾಧ್ಯವಾಗಿಸಲು ಕನಸು ಕಾಣುವ ಸ್ಫೂರ್ತಿದಾಯಕ ಅವಕಾಶವಾಗಿ ಪ್ರಸಿದ್ಧಿ ಪಡೆದಿದೆ.
ಟೂರ್ ಡಿ ಫ್ರಾನ್ಸ್‌ ಲ ಟೇಪ್
ಜಾಗತಿಕ ಮಟ್ಟದಲ್ಲಿ ಹವ್ಯಾಸಿ ಸೈಕ್ಲಿಂಗ್ ಆಸಕ್ತರಿಗಾಗಿ ಟೂರ್ ಡಿ ಫ್ರಾನ್ಸ್‌ ಅಧಿಕೃತ ಸ್ಪರ್ಧೆಗಳನ್ನು ಆಮ್ಯುಯೆರಿ ಸ್ಪೋರ್ಟ್ಸ್ ಸಂಸ್ಥೆಯು ಲ ಟೇಪ್ ಹೆಸರಿನಲ್ಲಿ ಆಯೋಜಿಸುತ್ತಾ ಬಂದಿದೆ. ಜಗತ್ತಿನಾದ್ಯಂತ ಇರುವ ಸೈಕ್ಲಿಸ್ಟ್ಗಳು ತಮ್ಮದೇ ದೇಶದಲ್ಲಿ ಟೂರ್ ಡಿ ಫ್ರಾನ್ಸ್‌ ಅನುಭವಗಳನ್ನು ಈ ಸ್ಪರ್ಧೆಯಲ್ಲಿ ಪಡೆಯಬಹುದು. ಪ್ರತಿವರ್ಷ ಸುಮಾರು 21 ದೇಶಗಳಲ್ಲಿ, 30ಕ್ಕೂ ಹೆಚ್ಚು ಸೈಕ್ಲಿಂಗ್ ಸ್ಪರ್ಧೆಗಳು ಈ ಬ್ರಾ6್ಯಂಡ್‌ನಡಿ ನಡೆಯುತ್ತಿವೆ. 50,000ಕ್ಕೂ ಹೆಚ್ಚು ಆಸಕ್ತರು ಪಾಲ್ಗೊಳ್ಳುತ್ತಿದ್ದಾರೆ. ಯುರೋಪ್, ಏಷ್ಯಾ, ಅಮೆರಿಕ, ಟರ್ಕಿ, ದುಬೈ, ಬ್ರೆಜಿಲ್, ಚೆಕ್ ರಿಪಬ್ಲಿಕ್, ಚೀನಾ, ಆಸ್ಟೆಥಲಿಯಾ, ಇದೀಗ ಭಾರತದಲ್ಲೂ ಇದು ಆಯೋಜಿತವಾಗುತ್ತಿದೆ.