/ಹುಮನಾಬಾದ್​ನ ಪೊಲೀಸ್​ ಗ್ರೌಂಡ್​ನಲ್ಲಿ ಮಂಗಳವಾರ ಡಿವೈಎಸ್​ಪಿ ಮಡೋಳಪ್ಪ ನೇತೃತ್ವದಲ್ಲಿ ಶಾಲಾ ಮತ್ತು ಕಾಲೇಜು ವಾಹನಗಳ ತಪಾಸಣೆ ನಡೆಸಲಾಯಿತು. ಸಿಪಿಐ ಸಂತೋಷ ತಟ್ಟೆಪಳ್ಳಿ, ಸಂಚಾರ ಪಿಎಸ್​ಐ ಹುಲೇಪ್ಪ ಗೌಡಗೊಂಡ ಇತರರಿದ್ದರು. 
ರಾಜ್ಯ

ಶಾಲಾ-ಕಾಲೇಜು ವಾಹನಗಳ ತಪಾಸಣೆ

ಪ್ರಮುಖ ಮುಖ್ಯಾಂಶಗಳು

  • ಸಂಚಾರಿ ನಿಯಮ ಪಾಲಿಸಲು ಸೂಚನೆ
ಹುಮನಾಬಾದ್​: ವಿದ್ಯಾರ್ಥಿಗಳ ಸುರಕ್ಷಿತ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಪಟ್ಟಣದ ಪೊಲೀಸ್​ ಇಲಾಖೆಯಿಂದ ಮಂಗಳವಾರ ಶಾಲಾ ಮತ್ತು ಕಾಲೇಜು ವಾಹನಗಳ ಸಮಗ್ರ ತಪಾಸಣೆ ನಡೆಸಲಾಯಿತು.
ಪಟ್ಟಣದ ಪೊಲೀಸ್​ ಗ್ರೌಂಡ್​ನಲ್ಲಿ ಡಿವೈಎಸ್​ಪಿ ಮಡೋಳಪ್ಪ ನೇತೃತ್ವದಲ್ಲಿ ನಡೆದ ಈ ವಿಶೇಷ ಪರಿಶೀಲನಾ ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ಶಾಲೆ ಹಾಗೂ ಕಾಲೇಜುಗಳ ವಾಹನಗಳನ್ನು ಕರೆಯಿಸಿ ಪರಿಶೀಲಿಸಲಾಯಿತು. ಒಟ್ಟು 10 ಶಾಲಾ-ಕಾಲೇಜುಗಳ ಸುಮಾರು 30 ಬಸ್​ಗಳು ಭಾಗವಹಿಸಿದ್ದವು.
ಈ ವೇಳೆ ವಾಹನಗಳ ಅಗತ್ಯ ದಾಖಲಾತಿಗಳು, ಫಿಟ್ನೆಸ್​ ಪ್ರಮಾಣಪತ್ರ, ವಿಮೆ, ಚಾಲನಾ ಪರವಾನಗಿ ಸೇರಿ ವಿವಿಧ ದಾಖಲೆಗಳು ಹಾಗೂ ಬಸ್​ಗಳಲ್ಲಿ ಅಳವಡಿಸಲಾದ ಸುರಕ್ಷಿತಾ ಕ್ರಮಗಳಾದ ತುರ್ತು ನಿರ್ಗಮನ ದ್ವಾರ, ಅಗ್ನಿಶಾಮಕ ಉಪಕರಣ, ಫಸ್ಟ್​ ಏಡ್​ ಬಾಕ್ಸ್​, ಸಿಸಿಟಿವಿ ಕ್ಯಾಮೆರಾ, ಸ್ಪೀಡ್​ ಗವರ್ನರ್​ ಸೇರಿ ವಿದ್ಯಾರ್ಥಿಗಳ ಭದ್ರತೆಗೆ ಅಗತ್ಯ ವ್ಯವಸ್ಥೆಗಳ ಕುರಿತು ಅಧಿಕಾರಿಗಳು ಪರಿಶೀಲಿಸಿದರು.
ನಂತರ ಡಿವೈಎಸ್​ಪಿ ಮಡೋಳಪ್ಪ ಮಾತನಾಡಿ, ವಿದ್ಯಾರ್ಥಿಗಳ ಜೀವ ಭದ್ರತೆ ಅತ್ಯಂತ ಮುಖ್ಯವಾಗಿದ್ದು, ಶಾಲಾ ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಕಡ್ಡಾಯ ಪಾಲಿಸಬೇಕು. ವಾಹನಗಳನ್ನು ನಿಯಮಿತವಾಗಿ ಪರಿಶೀಲನೆಗೆ ಒಳಪಡಿಸಿ ಸುರಕ್ಷತ ಸಂಚಾರಕ್ಕೆ ಆದ್ಯತೆ ನೀಡುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ತಿಳಿಸಿದರು.
ಸಿಪಿಐ ಸಂತೋಷ ತಟ್ಟೆಪಳ್ಳಿ ಮಾತನಾಡಿ, ವಾಹನ ಚಾಲಕರು ಹಾಗೂ ಶಾಲಾ ಪ್ರತಿನಿಧಿಗಳಿಗೆ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸಿದರು. ಅಲ್ಲದೆ ಅತೀ ವೇಗ ಚಾಲನೆ, ಮೊಬೈಲ್​ ಬಳಕೆ, ನಿಯಮ ಉಲ್ಲಂಘನೆಗಳಿಂದಾಗುವ ಅಪಾಯಗಳ ಬಗ್ಗೆ ಮಾಹಿತಿ ನೀಡಿದರು.
ಸಂಚಾರ ಠಾಣೆ ಪಿಎಸ್​ಐ ಹುಲೇಪ್ಪ ಗೌಡಗೊಂಡ, ಪೊಲೀಸ್​ ಸಿಬ್ಬಂದಿ, ಶಾಲಾ-ಕಾಲೇಜುಗಳ ಮುಖ್ಯಸ್ಥರು, ವಾಹನ ಚಾಲಕರು ಇದ್ದರು.