* ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ
* ಆಶಾ ಕಾರ್ಯಕರ್ತರಿಂದ ಅಹೋರಾತ್ರಿ ಧರಣಿ
ಬೆಂಗಳೂರು: ಮಾಸಿಕ ಗೌರವಧನ 15 ಸಾವಿರ ರೂ. ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿಯನ್ನು ಮಂಗಳವಾರ ಪ್ರಾರಂಭಿಸಿದ್ದಾರೆ.
ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಮಾತನಾಡಿ, ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಬಹಳ ವರ್ಷಗಳಿಂದ ಹಾಗೆ ಉಳಿದಿವೆ. ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುವ ಮುಂಚೆ ಭರವಸೆ ನೀಡುತ್ತಾರೆ. ಅಧಿಕಾರ ಸಿಕ್ಕಮೇಲೆ ಮರೆತು ಹೋಗುತ್ತಾರೆ. ಕಾರ್ಯಕತೆಯರಿಗೆ ನಿಗದಿಪಡಿಸಿರುವ ಕೆಲಸಕ್ಕಿಂತ ಹೆಚ್ಚು ದುಡಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಸಮಾನ ವೇತನ ನೀಡಲು ಹಿಂಜರಿಯುತ್ತಿದೆ ಎಂದು ದೂರಿದರು.
ಆರೋಗ್ಯ ಇಲಾಖೆಯಲ್ಲಿ, ಗ್ರಾಮೀಣ ಮತ್ತು ನಗರದ ಕೊಳಗೇರಿ ಜನರ ಮಧ್ಯೆ ಮನೆಯಿಂದ ಮನೆಗೆ ತೆರಳಿ ಎಲ್ಲ ರೀತಿಯ ಆರೋಗ್ಯ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಹಿಂದಿನ ಸಿಎಂ ಸಿದ್ದರಾಮಯ್ಯ ಅವರು ಕನಿಷ್ಠ 10 ಸಾವಿರ ರೂ. ಕೊಡುವುದಾಗಿ ಮಾತು ಕೊಟ್ಟಿದ್ದರು ಹೊರತು ಕಾರ್ಯರೂಪಕ್ಕೆ ಬರಲಿಲ್ಲ ಎಂದರು. ಮೊಬೈಲ್ ಆ್ಯಪ್ ಮೂಲಕ ಕೆಲಸ ಮಾಡಿಸುವುದನ್ನು ಕೈಬಿಡಬೇಕು, ಸಾಧ್ಯವಾಗದಿದ್ದಲ್ಲಿ ಮೊಬೈಲ್ ಕೆಲಸಕ್ಕೆ ಪ್ರೋತ್ಸಾಹಧನ ನಿಗದಿಪಡಿಸಬೇಕು. ಮೊಬೈಲ್ ಬಳಕೆ ಮಾಡಲು ಬಾರದವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಕಾರ್ಯಕರ್ತೆಯರಿಗೆ ಇಡಿಗಂಟು ನೀಡಬೇಕು. ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಎನ್ಐಒಎಸ್ ತರಬೇತಿ ಪೂರ್ಣಗೊಳಿಸಿದ ಆಶಾ ಕಾರ್ಯಕರ್ತರ ತರಬೇತಿಗೆ 5 ಸಾವಿರ ರೂ. ವಿಶೇಷ ಪ್ರೋತ್ಸಾಹ ನೀಡಬೇಕು. ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳು ನಿಶ್ಚಿತ ಗೌರವಧನ, ನಿಗದಿತ ಪ್ರೋತ್ಸಾಹಧನ ನೀಡಬೇಕು. ಬೇಡಿಕೆಗಳನ್ನು ಈಡೇರಿಸುವ ತನಕ ಧರಣಿ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕಮ್ಯುನಿಸ್ಟ್ ರಾಜ್ಯ ಕಾರ್ಯದರ್ಶಿ ಕೆ.ಉವಾ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಹಂಪಿ ವಿವಿ ವಿಶ್ರಾಂತ ಕುಲಪತಿ ಮುರಿಗೆಪ್ಪ, ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕಿ ಲತಾ, ಸಾವಾಜಿಕ ಹೋರಟಗಾರರಾದ ಉಗ್ರ ನರಸಿಂಹೆಗೌಡ, ಪದಾಧಿಕಾರಿಗಳಾದ ಚಂದ್ರಕಾಂತ ವಡ್ಡು, ಡಾ. ಸುಧಾ ಕಾಮತ್, ಚಂದ್ರಕಲಾ ಮತ್ತಿತರರು ಉಪಸ್ಥಿತರಿದ್ದರು.
ಗ್ಯಾರಂಟಿ ಹೆಸರಿನಲ್ಲಿ ದುಡಿಯುವ ಹೆಣ್ಣು ಮಕ್ಕಳಿಗೆ ಸರ್ಕಾರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುತ್ತಿಲ್ಲ. ಹೋರಾಟ ನಡೆಸಿದಾಗೆಲ್ಲ ಸರ್ಕಾರ ಭರವಸೆ ನೀಡುತ್ತದೆಯೇ ಹೊರತು ಬಗೆಹರಿಸುತ್ತಿಲ್ಲ. ಸಮಸ್ಯೆಗೆ ಪರಿಹಾರ ಸಿಗುವವರಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. - ಡಿ.ನಾಗಲಕ್ಷ್ಮಿ, ಸಂಘದ ರಾಜ್ಯ ಕಾರ್ಯದರ್ಶಿ.