ಕೊಂಕಣಗಾಂವ ರಸ್ತೆ ಸಂಪೂರ್ಣ ಹದಗೆಟ್ಟಿರುವುದು.
- ಸಂಪೂರ್ಣ ಹದಗೆಟ್ಟ ಕೊಂಕಣಗಾಂವ ರಸ್ತೆ
ಚಡಚಣ: ಕೊಂಕಣಗಾಂವ ಘಾಟ್‌ದಿಂದ ಕೊಂಕಣಗಾಂವ್‌ದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ. ಚಡಚಣ, ಕೊಂಕಣಗಾಂವ ಹಾಗೂ ಮಹಾರಾಷ್ಟ್ರದ ಸೊನಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.
ರಸ್ತೆಯಾದ್ಯಂತ ದೊಡ್ಡ ಗುಂಡಿಗಳು ಬಿದ್ದಿದ್ದು, ಕೆಲವೆಡೆ ಡಾಂಬರ್ ಸಂಪೂರ್ಣ ಕಿತ್ತು ಹೋಗಿದೆ. ಮಳೆಗಾಲದಲ್ಲಿ ಈ ಗುಂಡಿಗಳು ನೀರಿನಿಂದ ತುಂಬಿ, ವಾಹನ ಸವಾರರಿಗೆ ತೊಂದರೆ ಉಂಟಾಗುತ್ತದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು, ಶಾಲಾ ವಿದ್ಯಾರ್ಥಿಗಳು ಹಾಗೂ ರೈತರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ಉಂಟಾಗಿದೆ. ಇನ್ನು ತುರ್ತು ಸೇವೆಗಳಾದ ಆಂಬುಲೆನ್ಸ್ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಜೀವ ಭದ್ರತೆಗೂ ಅಪಾಯ ಎದುರಾಗುತ್ತಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಹದಗೆಟ್ಟಿರುವ ರಸ್ತೆಯ ಕುರಿತು ಯಾವುದೇ ಅಧಿಕಾರಿಯಾಗಲಿ, ಜನಪ್ರತಿನಿಧಿಗಳಾಗಲೀ ತಲೆಕೆಡಿಸಿಕೊಳ್ಳುತ್ತಿಲ್ಲ, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಮಸ್ಯೆ ಇನ್ನಷ್ಟು ಗಂಭೀರವಾಗುತ್ತದೆ. ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ತಕ್ಷಣ ಗಮನಹರಿಸಿ ರಸ್ತೆ ದುರಸ್ತಿ ಕಾರ್ಯವನ್ನು ಸಮರ್ಪಕವಾಗಿ ಪೂರ್ಣಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
"
ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರು, ರೈತರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ಕಷ್ಟ ಅನುಭವಿಸುತ್ತಿದ್ದರೂ, ಯಾರೂ ಗಮನಹರಿಸದೇ ಇರುವುದು ವಿಪರ್ಯಾಸ. ಇನ್ನಾದರೂ ತಕ್ಷಣವೇ ಅಧಿಕಾರಿಗಳು ಎಚ್ಚೆತ್ತು, ಈ ರಸ್ತೆಯ ಡಾಂಬರೀಕರಣ ಕಾರ್ಯ ಕೈಗೊಳ್ಳಬೇಕು.
ರವಿಕಾಂತ ಸ್ಥಳೀಯ ನಿವಾಸಿ.