ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್
ಬೆಂಗಳೂರು: ದೇಶದಲ್ಲಿ ಸುಗಮ ರೈಲು ಸಂಚಾರ ಮತ್ತು ಸರಕುಸಾಗಣೆ ಉದ್ದೇಶದಿಂದ ಅತಿಸಾಂದ್ರತೆ ಇರುವ 7 ಮಾರ್ಗಗಳನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಯೋಜನೆಯಲ್ಲಿ ಕರ್ನಾಟಕದ ಒಂದೇ ಒಂದು ಮಾರ್ಗವನ್ನೂ ಪರಿಗಣಿಸದೆ ಇರುವುದು ಅನ್ಯಾಯದ ಪರಮಾವಧಿಯಾಗಿದೆ. ಈ ಬಗ್ಗೆ ಕೇಂದ್ರಕ್ಕೆ ಮುಖ್ಯಮಂತ್ರಿ ಅವರಿಂದ ಪತ್ರ ಬರೆಸುವ ಜತೆಗೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನೂ ಖುದ್ದಾಗಿ ಭೇಟಿ ಮಾಡುವಂತೆ ಕೋರುತ್ತೇನೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಅಶ್ವಿನಿ ವೈಷ್ಣವ್ ದೆಹಲಿ- ಹೌರಾ, ಹೌರಾ- ಚೆನ್ನೈ, ಚೆನ್ನೈ- ಮುಂಬೈ, ಮುಂಬೈ- ದೆಹಲಿ, ದೆಹಲಿ- ಚೆನ್ನೈ, ಮುಂಬೈ- ಹೌರಾ, ದೆಹಲಿ- ಗುವಾಹತಿ ಹೀಗೆ ಒಟ್ಟು 7 ರೈಲ್ವೆ ಮಾರ್ಗಗಳನ್ನು ಚತುಷ್ಪಥವಾಗಿ ಮೇಲ್ದರ್ಜೆಗೆ ಏರಿಸುವುದಾಗಿ ಕೇಂದ್ರ ರೈಲ್ವೆ ಸಚಿವರು ಘೋಷಿಸಿದ್ದರು.
ರಾಜ್ಯದಲ್ಲಿ ಬೆಂಗಳೂರು- ಪುಣೆ- ಮುಂಬೈ, ಬೆಂಗಳೂರು- ಮೈಸೂರು, ಬೆಂಗಳೂರು- ಮಂಗಳೂರು, ಬೆಂಗಳೂರು- ಚೆನ್ನೈ, ಬೆಂಗಳೂರು- ಶಿವಮೊಗ್ಗ, ಬೆಂಗಳೂರು- ವಿಜಯಪುರ, ಬೆಂಗಳೂರು- ಕಲಬುರಗಿ ಹೀಗೆ ಹತ್ತಾರು ಅತಿದಟ್ಟಣೆಯ ಮಾರ್ಗಗಳಿವೆ. ಇವುಗಳನ್ನು ಕೇಂದ್ರ ಸರ್ಕಾರವು ಸಮಗ್ರವಾಗಿ ಚತುಷ್ಪಥ ಮಾರ್ಗಗಳನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರವು ನಮ್ಮ ರಸ್ತೆ ಜಾಲಕ್ಕೆ ಪೂರಕವಾಗಿ ರಾಜ್ಯದಲ್ಲಿ ರೈಲು ಮಾರ್ಗಗಳನ್ನು ಅಭಿವೃದ್ಧಿ ಮಾಡದೆ ಮಲತಾಯಿ ಧೋರಣೆ ತೋರುತ್ತಿದೆ. ಇದರಿಂದಾಗಿ ನಮ್ಮ ಹೆದ್ದಾರಿಗಳ ಮೇಲೆ ವಿಪರೀತ ಒತ್ತಡ ಉಂಟಾಗಿದೆ. ರಾಜ್ಯದಲ್ಲಿ 330 ಕಿ.ಮೀ. ಉದ್ದದ ಕರಾವಳಿ ತೀರವಿದೆ. ಕರಾವಳಿಯಲ್ಲಿ ಇರುವ ಬಂದರು ಪಟ್ಟಣಗಳಿಗೂ ಒಳನಾಡಿಗೂ ಸಮರ್ಪಕ ರೈಲು ಸಂಪರ್ಕ ಆಗಬೇಕು. ಆದರೆ ಈ ವಿಚಾರದಲ್ಲೂ ನಮಗೆ ಅನ್ಯಾಯವಾಗಿದೆ. ಮಂಗಳೂರು, ಭಟ್ಕಳ, ಹೊನ್ನಾವರ, ಕುಂದಾಪುರ, ಕಾರವಾರ ಮುಂತಾದೆಡೆಯಿಂದ ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ ಮುಂತಾದ ಪ್ರಮುಖ ಕೇಂದ್ರಗಳಿಗೆ ಸರಿಯಾದ ರೈಲ್ವೆ ಸಂಪರ್ಕವೇ ಇಲ್ಲವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಈ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಬೆಂಗಳೂರಿನಿಂದ ಚೆನ್ನೈ ಮತ್ತು ಹೈದರಾಬಾದ್‌ಗೆ ಹೈಸ್ಪೀಡ್ ರೈಲು ಯೋಜನೆಗಳನ್ನು ಘೋಷಿಸಿದೆ. ಇವುಗಳಿಂದ ತಮಿಳುನಾಡು ಮತ್ತು ಆಂಧ್ರ- ತೆಲಂಗಾಣಗಳಿಗೆ ಪ್ರಯೋಜನವಾಗುತ್ತದೆ. ಏಕೆಂದರೆ ಈ ಎರಡೂ ಮಾರ್ಗಗಳಲ್ಲಿ ರೈಲುಗಳು ನಮ್ಮ ರಾಜ್ಯದೊಳಗೆ ನೂರು ಕಿಲೋಮೀಟರ್ ಕೂಡ ಓಡುವುದಿಲ್ಲ. ಇದರ ಬಗ್ಗೆ ನಾನು ತಕ್ಷಣವೇ ಧ್ವನಿಯೆತ್ತಿ, ಬೆಂಗಳೂರು- ಹುಬ್ಬಳ್ಳಿ- ಪುಣೆ ಮಾರ್ಗದಲ್ಲಿ ಹೈಸ್ಪೀಡ್ ರೈಲುಮಾರ್ಗ ಬರಬೇಕು ಎಂದು ಗಮನ ಸೆಳೆದೆ. ಆದರೆ ಕೇಂದ್ರ ಸರ್ಕಾರ ಇದುವರೆಗೂ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಪಾಟೀಲ್ ಹೇಳಿದ್ದಾರೆ.