ಸಕಲೇಶಪುರದಲ್ಲಿ ಆಯೋಜಿಸಿದ್ದ ಜೆಡಿಎಸ್ ಎಸ್ಸಿ-ಎಸ್ಟಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಎಚ್.ಕೆ ಕುಮಾರಸ್ವಾಮಿ ಮಾತನಾಡಿದರು. ಕಾಡಪ್ಪ, ಚಂಚಲಾ ಕುಮಾರಸ್ವಾಮಿ, ಹೆನ್ನಲಿ ಈರಯ್ಯ, ಹಾನುಬಾಳ್ ಗೋಪಾಲ್, ಬಾಳ್ಳು ಧರ್ಮ, ಮಂಜುಳಾ, ರುಕ್ಮಿಣಿ ಇದ್ದರು. 
ರಾಜ್ಯ

ಕಾಂಗ್ರೆಸ್‌ನಲ್ಲಿ ದಲಿತರಿಗೆ ಅನ್ಯಾಯ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಎಚ್.ಕೆ ಕುಮಾರಸ್ವಾಮಿ
  • ಜೆಡಿಎಸ್ ಎಸಿ-್ಸಎಸ್ಟಿ ಕಾರ್ಯಕರ್ತರ ಸಭೆ

ಸಕಲೇಶಪುರ:

ದಲಿತರಿಗೆ ಕಾಂಗ್ರೆಸ್‌ನಲ್ಲಿ ನ್ಯಾಯವಾಗಿ ಯಾವ ಹಕ್ಕುಗಳ ದೊರೆಯುತ್ತಿಲ್ಲ. ಇನ್ನಾದರೂ ದಲಿತರು ಸ್ವಾಭಿಮಾನ ಬೆಳಸಿಕೊಳ್ಳಬೇಕು ಎಂದು ಮಾಜಿ ಸಚಿವ ಎಚ್.ಕೆ ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಆಯೋಜಿಸಿದ್ದ ಜೆಡಿಎಸ್ ಎಸಿ-್ಸಎಸ್ಟಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ತಾಲೂಕಿನಲ್ಲಿ ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಪರಿಗಣಿಸಿರುವ ಕಾಂಗ್ರೆಸ್ ಎಲ್ಲ ಹಂತದಲ್ಲೂ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
94ಸಿ,94 ಸಿಸಿ ಹಾಗೂ ಫಾರ್ಮ್ 53ರಡಿ ಜಮೀನು ಹಂಚಿಕೆಯಲ್ಲಿ ತಾಲೂಕಿನ ದಲಿತರಿಗೆ ಅನ್ಯಾಯವಾಗುತ್ತಿದೆ. ಕಂದಾಯ ಸಚಿವರು ತಾಲೂಕಿಗೆ ಆಗಮಿಸಿ ಆರು ತಿಂಗಳು ಕಳೆದಿದ್ದು, ಈವರೆಗೂ ಯಾರಿಗೂ ಹಕ್ಕುಪತ್ರ ನೀಡಿಲ್ಲ. ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತರಿಗೆ ಅನ್ಯಾಯವಾದಾಗ ಸಿಡಿದೆದ್ದು ನ್ಯಾಯ ಕೇಳುವುದನ್ನು ಕರಗತ ಮಾಡಿಕೊಳ್ಳಬೇಕಿದೆ ಎಂದ ಅವರು, ಮಾಡುವ ಕೆಲಸ ಜನರ ಮನಸ್ಸಿನಲ್ಲಿ ಉಳಿಯಬೇಕೇ ಹೊರತು, ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿದರೆ ಜನರು ಮೆಚ್ಚುವುದಿಲ್ಲ. ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಜನಪರ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸದ್ಯದಲ್ಲೇ ಜೆಡಿಎಸ್‌ನ ಎಲ್ಲ ವಿಭಾಗಗಳಿಗೂ ಪದಾಧಿಕಾರಿಗಳ ನೇಮಕವಾಗಲಿದ್ದು, ಪಕ್ಷದ ಬಗ್ಗೆ ನಿಷ್ಠೆ ಹೊಂದಿರುವ ಹಾಗೂ ಸಕ್ರಿಯ ವ್ಯಕ್ತಿಗಳಿಗೆ ಹುದ್ದೆ ಸಿಗಲಿದೆ. ಪಕ್ಷ ಸಂಘಟನೆಯತ್ತ ಎಲ್ಲರೂ ಗಮನಹರಿಸಬೇಕು. ಸೋಲಿನ ಕಾರಣಗಳನ್ನು ಪರಾಮಾರ್ಶೆ ಮಾಡಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ತಪ್ಪುಗಳು ಮರುಕಳಿಸದಂತೆ ಕೆಲಸ ಮಾಡೋಣ. ಎನ್‌ಡಿಎ ಹೈಕಮಾಂಡ್ ಸೂಚಿಸಿದ ವ್ಯಕ್ತಿ ಪರ ಚುನಾವಣೆಯಲ್ಲಿ ಕೆಲಸ ಮಾಡುವುದು ಅನಿವಾರ್ಯ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಕಾಡಪ್ಪ ಮಾತನಾಡಿ, ಕಳೆದ ಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸ ಸೋಲಿಗೆ ಕಾರಣವಾಯಿತು. ಕ್ಷೇತ್ರದಲ್ಲಿ ನಮ್ಮ ಶಾಸಕರಿದ್ದಾಗ ಕಾರ್ಯಕರ್ತರಿಗೆ ಬೆಲೆ. ನಮ್ಮಲ್ಲಿ ಯಾವುದೇ ಭಿನ್ನಮತವಿದ್ದರೂ ಚುನಾವಣೆ ವೇಳೆ ಅದನ್ನು ಪ್ರದರ್ಶಿಸದೆ ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡು ಒಂದು ಕುಟುಂಬದಂತೆ ಕೆಲಸ ಮಾಡಿದಾಗ ಮಾತ್ರ ಕ್ಷೇತ್ರದಲ್ಲಿ ನಮ್ಮ ಶಾಸಕರು ಇರಲಿದ್ದಾರೆ ಎಂದರು.
ಜೆಡಿಎಸ್ ಮುಖಂಡರಾದ ಚಂಚಲಾ ಕುಮಾರಸ್ವಾಮಿ, ಹೆನ್ನಲಿ ಈರಯ್ಯ, ಹಾನುಬಾಳ್ ಗೋಪಾಲ್, ಬಾಳ್ಳು ಧರ್ಮ, ಮಂಜುಳಾ, ರುಕ್ಮಿಣಿ ಮಲ್ಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.