Injustice in Tumul elections
ಮಧುಗಿರಿ: ತುಮುಲ್ ನಿರ್ದೇಶಕರ ಚುನಾವಣೆಯಲ್ಲಿ ಈ ಸರ್ಕಾರದಲ್ಲಿ ನನಗೆ ಅನ್ಯಾಯವಾಗಿತ್ತು. ಆದರೆ, ನ್ಯಾಯಾಲಯದಲ್ಲಿ ಜಯ ದೊರೆತಿದೆ ಎಂದು ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ತುಮುಲ್ ಉಪಕೇಂದ್ರ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಒಂದೂವರೆ ವರ್ಷದಿಂದ ಬಹಳಷ್ಟು ಏಳು ಬೀಳು ಕಂಡಿದ್ದೇನೆ. ತುಮುಲ್ ನಿರ್ದೇಶಕರ ಚುನಾವಣೆಯಲ್ಲಿ ಸೋಲುವಂತಿರಲಿಲ್ಲ. ಆದರೂ ಸೋತೆ, ನನಗೆ ಅನ್ಯಾಯವಾಯಿತು. ಚುನಾವಣೆ ಫಲಿತಾಂಶ ಏನು ಎಂಬುದು ಡೇರಿ ಕಾರ್ಯದರ್ಶಿಗಳಿಗೆ ಗೊತ್ತು. ಅರ್ಹ ಮತದಾರರ ಪಟ್ಟಿ (ಡೆಲಿಗೇಟ್ಸ್ ಫಾಮ್ರ್) ರಾತ್ರೋರಾತ್ರಿ ಮಾಯವಾಗಿತ್ತು.
ನಮ್ಮನ್ನು ಅನರ್ಹ ಮತದಾರರ ಪಟ್ಟಿಗೆ ಸೇರಿಸಲಾಯಿತು. ಕೊನೆಗೆ ಹೈಕೋರ್ಟ್ಗೆ ಹೋಗಿ ಮತದಾನದ ಹಕ್ಕು ಪಡೆಯಲಾಯಿತು. ನನ್ನ ದುರದೃಷ್ಟಕ್ಕೆ ನನ್ನ ಜತೆ ನನ್ನ ಎದುರಾಳಿಗೂ (ನಾಗೇಶ್ ಬಾಬು) ಮತದಾನದ ಹಕ್ಕು ನೀಡಲಾಯಿತು. ನನ್ನ ಎದುರಾಳಿಗೆ ಅಂದೇ ಮತದಾನದ ಹಕ್ಕು ನೀಡದೇ ಇದ್ದಿದ್ದರೆ ಪ್ರಕರಣ ಇಲ್ಲಿಯವರೆಗೂ ಬರುತ್ತಲೇ ಇರಲಿಲ್ಲ ಎಂದರು.
ಪುರಸಭೆ ಮಾಜಿ ಸದಸ್ಯ ಎಂ.ಆರ್. ಜಗನ್ನಾಥ್ ಮಾತನಾಡಿದರು. ಇದಕ್ಕೂ ಮೊದಲು ಪಟ್ಟಣದ ದಂಡಿನಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ ನಂತರ ಕಾರ್ಯಕರ್ತರೊಂದಿಗೆ ದೇವಸ್ಥಾನದಿಂದ ತುಮುಲ್ ಉಪ ಕಚೇರಿಯವರೆಗೂ ಬೃಹತ್ ಬೈಕ್ ರ್ಯಾಲಿ ಮೂಲಕ ತೆರಳಿ ಕಚೇರಿಯಲ್ಲಿ ಪೂಜೆ ಸಲ್ಲಿಸಿದರು.