ತಾತನ ಸ್ವಯಾರ್ಜಿತ ಆಸ್ತಿಯು, ಕುಟುಂಬದ ಆಸ್ತಿ ಹಂಚಿಕೆ ಒಪ್ಪಂದದ ಅಥವಾ ಉತ್ತರಾಧಿಕಾರದ ಮೂಲಕ ತಂದೆಗೆ ಬಂದ ಮಾತ್ರಕ್ಕೆ ಅದು ಪಿತ್ರಾರ್ಜಿತ ಆಸ್ತಿ ಆಗುವುದಿಲ್ಲ. ಅದು ತಂದೆಯ ವೈಯಕ್ತಿಕ ಆಸ್ತಿ ಎಂದೇ ಪರಿಗಣಿಸಲ್ಪಡುತ್ತದೆ. ಹಾಗಿರುವಾಗ ಆ ಆಸ್ತಿಯಲ್ಲಿ ಜನ್ಮಸಿದ್ಧ ಹಕ್ಕು ಸಾಧಿಸಲು ಮೊಮ್ಮಕ್ಕಳಿಗೆ ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟನೆ ನೀಡಿದೆ.
ತಂದೆಯ ಸ್ವಾಧಿನದಲ್ಲಿರುವ ಆಸ್ತಿಯಲ್ಲಿ ತಮಗೂ ಪಾಲಿದೆ ಎಂದು ವಾದಿಸಿ ಉಷಾ ಎನ್. ಸ್ವಾಮಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.
ಅರ್ಜಿದಾರರು ತನ್ನ ತಂದೆ, ತಾಯಿ ಮತ್ತು ಸಹೋದರಿಯ ವಿರುದ್ಧ ದಾವೆ ಹೂಡಿ, ಬೆಂಗಳೂರು ಮತ್ತು ಸುತ್ತಮುತ್ತಲಿನ ನಾಲ್ಕು ಆಸ್ತಿಗಳಲ್ಲಿ ಸಮಾನ ಪಾಲು ನೀಡುವಂತೆ ಕೋರಿದ್ದರು. ಆಸ್ತಿಗಳು ತಂದೆಗೆ ಪಿತ್ರಾರ್ಜಿತವಾಗಿ ಬಂದಿದ್ದು, ಅವುಗಳಿಂದ ಬಂದ ಆದಾಯದಿಂದ ಇತರ ಆಸ್ತಿಗಳನ್ನು ಖರೀದಿಸಲಾಗಿದೆ ಎಂದು ಆಕೆ ವಾದಿಸಿದ್ದರು. ಅಲ್ಲದೆ, ಕುಟುಂಬದ ಚಿನ್ನಾಭರಣ, ಬ್ಯಾಂಕ್ ಠೇವಣಿ, ಹೂಡಿಕೆಗಳಲ್ಲಿಯೂ ತನ್ನ ಪಾಲು ನೀಡಬೇಕೆಂದು ಕೋರಿದ್ದರು. ಆದರೆ ಪ್ರತಿವಾದಿಗಳು, ವಿವಾದಿತ ಆಸ್ತಿಗಳು ಜಂಟಿ ಕುಟುಂಬದ ಆಸ್ತಿಗಳಲ್ಲ, ಬದಲಾಗಿ ತಂದೆಯ ವೈಯಕ್ತಿಕ ಆಸ್ತಿಗಳಾಗಿವೆ. ಹೀಗಾಗಿ ಪುತ್ರಿಗೆ ವಿಭಜನೆ ಕೇಳುವ ಹಕ್ಕಿಲ್ಲ ಎಂದು ವಾದಿಸಿದ್ದರು.
ಯಾಕೆ ಅನ್ವಯವಿಲ್ಲ?:
2005ರ ತಿದ್ದುಪಡಿಯ ನಂತರ ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಪುತ್ರಿಯರೂ ಪುತ್ರರಂತೆ ಪಾಲುದಾರರಾಗುತ್ತಾರೆ ಎಂಬುದನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಆದರೆ ಈ ಹಕ್ಕು ಹಿಂದೂ ಅವಿಭಕ್ತ ಕುಟುಂಬದ ಪಿತ್ರಾರ್ಜಿತ ಮತ್ತು ಇಡೀ ಕುಟುಂಬದ ಮಾಲಿಕತ್ವ ಇರುವ ಆಸ್ತಿಗಳಿಗೆ ಅನ್ವಯಿಸುತ್ತದೆ. ಆದ್ದರಿಂದ ತಂದೆಯ ಸ್ವಯಾರ್ಜಿತ ಅಥವಾ ಅಥವಾ ವೈಯಕ್ತಿಕ ಆಸ್ತಿಗಳಲ್ಲಿ ಜನ್ಮಸಿದ್ಧ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.