Information collection from officials and farmers 
ರಾಜ್ಯ

ಅಧಿಕಾರಿಗಳು, ರೈತರಿಂದ ಮಾಹಿತಿ ಸಂಗ್ರಹ

ಕೊರಟಗೆರೆ: ತಾಲೂಕಿನ ಅಕಿರಾಪುರ ಸಂತೆ ಮೈದಾನದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಗುರುವಾರ ಭೇಟಿ ನೀಡಿ ಕೇಂದ್ರದ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಂಜುನಾಥ್ ಸೇರಿ ಕೃಷಿ, ಕಂದಾಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಖರೀದಿ ಪ್ರಕ್ರಿಯೆ, ತೂಕದ ವ್ಯವಸ್ಥೆ, ನೋಂದಣಿ ವಿಧಾನ ಹಾಗೂ ಪಾವತಿ ಕ್ರಮಗಳ ಕುರಿತು ವಾಹಿತಿ ಪಡೆದರು.
ಕೇಂದ್ರದಲ್ಲಿ ರಾಗಿ ವಾರಾಟಕ್ಕೆ ಆಗಮಿಸಿದ್ದ ರೈತರೊಂದಿಗೆ ನೇರವಾಗಿ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಯಾವುದೇ ತೊಂದರೆ ಇದ್ದರೆ ತಿಳಿಸಲು ಮನವಿ ವಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈತರು, ಖರೀದಿ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದ್ದು, ತೂಕದ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಪಾವತಿ ಕ್ರಮವೂ ಸರಿಯಾಗಿ ನಡೆಯುತ್ತಿದೆ. ರಾಗಿ ಖರೀದಿ ಸಂದರ್ಭದಲ್ಲಿ ಗೋಣಿಚೀಲ ತೂಕದ ಬಗ್ಗೆ ಗೊಂದಲ ಇತ್ತು. ಈಗ ಎಲ್ಲವೂ ಸರಿ ಹೋಗಿದೆ ಎಂದು ರೈತರು ಜಿಲ್ಲಾಧಿಕಾರಿಗೆ ತಿಳಿಸಿದರು.
ಜಿಲ್ಲಾಧಿಕಾರಿಗಳು ಕೇಂದ್ರದ ದಾಖಲೆಪತ್ರಗಳು, ತೂಕದ ಪರಿಷ್ಕರಣೆ, ಸರದಿ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳ ಬಗ್ಗೆ ವಾಹಿತಿ ಪಡೆದು, ರೈತರಿಗೆ ಅನಗತ್ಯ ವಿಳಂಬವಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.
ಕೇಂದ್ರದಲ್ಲಿ ಕುಡಿಯುವ ನೀರು, ನೆರಳು ವ್ಯವಸ್ಥೆ, ಕುಳಿತುಕೊಳ್ಳುವ ವ್ಯವಸ್ಥೆ ಸೇರಿ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿ, ರೈತರಿಗೆ ಅನುಕೂಲಕರ ವಾತಾವರಣ ಕಲ್ಪಿಸುವಂತೆ ಸೂಚಿಸಿದರು.