renukaswamy and darshan 
ರಾಜ್ಯ

ಸಾಕ್ಷಿಗೆ ಬೆದರಿಕೆ ಹಾಕಿದ್ದ ಆರೋಪಿಗಳ ಜತೆಗೆ ಪ್ರಭಾವಿ ಮಹಿಳೆ ನಂಟು

ಬೆಂಗಳೂರು:

ರೇಣುಕಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ್ದ ಪ್ರಕರಣದ ತನಿಖೆ ಚುರುಕಾಗಿದ್ದು, ಇದೀಗ ಮತ್ತೇ ಮೂವರು ಆರೋಪಿಗಳ ಹೆಸರು ಕೇಳಿ ಬಂದಿದೆ.

ಪ್ರಕರಣದ 49ನೇ ಸಾಕ್ಷಿಗೆ ಬೆದರಿಕೆ ಹಾಕಿದ್ದ ಕೊಲೆ ಆರೋಪಿ ನಟ ದರ್ಶನ್ ಅಭಿಮಾನಿಗಳಾದ ಪುನಿತ್, ವೇಣು ಮತ್ತು ಸುಹಾಸ್‌ನನ್ನು ಒಂದೂವರೆ ತಿಂಗಳ ಹಿಂದೆ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು.
ಆರೋಪಿ ಪುನಿತ್ ತನ್ನ ಮೊಬೈಲ್ ಅಲ್ಲಿರುವ ಎಲ್ಲ ಸಾಕ್ಷಿಗಳನ್ನು ಅಳಿಸಿ, ಮೊಬೈಲ್ ಬಚ್ಚಿಟ್ಟಿದ್ದ. ತನಿಖೆ ವೇಳೆ ಈತನ ಮೊಬೈಲ್ ಜಪ್ತಿಮಾಡಿ ಅದನ್ನು ರಿಟ್ರಿವ್ ಮಾಡಿದ್ದರು. ಈ ವೇಳೆ ಗೌರವ್ ಶೆಟ್ಟಿ ಮತ್ತು ಕಿರಣ್ ರೆಡ್ಡಿ ಎಂಬುವರ ಜತೆಗೆ ಆರೋಪಿ ನಿರಂತರ ಸಂಪರ್ಕದಲ್ಲಿದ್ದ ಮಾಹಿತಿ ತಿಳಿದು ಬಂದಿದೆ. ಇದರ ಜತೆಗೆ ಪ್ರಭಾವಿ ಮಹಿಳೆಯೊಬ್ಬರ ಹೆಸರೂ ಕೇಳಿ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಪುನೀತ್ ಬಂಧನವಾಗುತ್ತಿದ್ದಂತೆ ಗೌರವ್ ಹಾಗೂ ಕಿರಣ್ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ. ಇವರಬ್ಬರಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು, ಇವರ ಬಂಧನ ಬಳಿಕ ಸಾಕ್ಷಿ ಬೆದರಿಕೆ ಪ್ರಕರಣದಲ್ಲಿ ಪ್ರಭಾವಿಗಳ ಹೆಸರು ಹೊರಬರುವ ಸಾಧ್ಯತೆಯಿದೆ.

ಏನಿದು ಪ್ರಕರಣ..?

ಕೊಲೆ ಆರೋಪಿ ನಟ ದರ್ಶನ್ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳದಂತೆ 49ನೇ ಸಾಕ್ಷಿದಾರ ಸಂದೀಪ್ ಎಂಬುವವರಿಗೆ ಪುನಿತ್, ವೇಣು ಮತ್ತು ಸುಹಾಸ್ ಬೆದರಿಕೆ ಹಾಕಿದ್ದರು. ಇವರ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.