ದಿವಾಳಿ ಸರ್ಕಾರದಲ್ಲಿ 'ಇಂದಿರಾ ಕಿಟ್'ಗೂ ಕಟ್: ವಿಜಯವಾಣಿ ವರದಿ ಉಲ್ಲೇಖಿಸಿ ಕೈ ಸರ್ಕಾರಕ್ಕೆ ಆರ್. ಅಶೋಕ್ ಚಾಟಿ! Indira Kit
- ವಿಜಯವಾಣಿ ವರದಿ ಬೆನ್ನಲ್ಲೇ ಕೈ ಸರ್ಕಾರಕ್ಕೆ ಆರ್. ಅಶೋಕ್ ಚಾಟಿ
- ಇಂದಿರಾ ಕಿಟ್ ಯೋಜನೆ ಹಳ್ಳ ಹಿಡಿದಿದ್ದಕ್ಕೆ ವಿಪಕ್ಷ ನಾಯಕ ತೀವ್ರ ಆಕ್ರೋಶ
- ದಿವಾಳಿ ಸರ್ಕಾರದಲ್ಲಿ ಬಡವರ ಕಿಟ್‌ಗೂ ಬಿತ್ತು ಕಟ್ ಎಂದು ಆಕ್ರೋಶ
- ಡಿಕೆ ಶಿವಕುಮಾರ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
ಬೆಂಗಳೂರು: ಕನ್ನಡದ ನಂ. 1 ದಿನಪತ್ರಿಕೆ 'ವಿಜಯವಾಣಿ' ಪ್ರಕಟಿಸಿರುವ ವಿಶೇಷ ವರದಿಯನ್ನು ಉಲ್ಲೇಖಿಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಆರ್. ಅಶೋಕ್, "ಘೋಷಣೆಗಷ್ಟೇ ಸೀಮಿತವಾಯಿತು ಇಂದಿರಾ ಕಿಟ್ ( Indira Kit ) ದಿವಾಳಿ ಸರ್ಕಾರದಲ್ಲಿ ಇಂದಿರಾ ಕಿಟ್‌ಗೂ ಬಿತ್ತು ಕಟ್" ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ.
ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ಅಕ್ಕಿ ಬದಲು ತೊಗರಿಬೇಳೆ, ಅಡುಗೆ ಎಣ್ಣೆ, ಉಪ್ಪು, ಸಕ್ಕರೆ ಒಳಗೊಂಡ ಪೌಷ್ಟಿಕಾಂಶ ಪದಾರ್ಥಗಳ 'ಇಂದಿರಾ ಕಿಟ್' ವಿತರಿಸುವ ಮಹತ್ವಾಕಾಂಕ್ಷಿ ಯೋಜನೆ ಆರಂಭಕ್ಕೂ ಮುನ್ನವೇ ಹಳ್ಳ ಹಿಡಿದಿರುವುದನ್ನು ಆರ್.ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ. ಟೆಂಡರ್ ಪ್ರಕ್ರಿಯೆಯಲ್ಲಿನ ಅಧಿಕಾರಿಗಳ ತಾರತಮ್ಯ, ಸರ್ಕಾರದ ಮಟ್ಟದ ಲಾಬಿ ಹಾಗೂ ತೀವ್ರ ಆರ್ಥಿಕ ಹೊರೆಯ ನೆಪವೊಡ್ಡಿ ಈಗ ಕಿಟ್ ವಿತರಣೆಯ ಪ್ರಸ್ತಾವನೆಯನ್ನೇ ಕೈಬಿಟ್ಟು ಕೇವಲ ಅಕ್ಕಿಯನ್ನೇ ಮುಂದುವರಿಸಲು ಇಲಾಖೆ ನಿರ್ಧರಿಸಿರುವುದನ್ನು ಆರ್. ಅಶೋಕ್ ಅವರು ಸರ್ಕಾರದ ದಿವಾಳಿತನ ಹಾಗೂ ಸಾರ್ವಜನಿಕರಿಗೆ ಮಾಡಿದ ದ್ರೋಹ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ವಿಜಯವಾಣಿ ವರದಿಯನ್ನು ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್. ಅಶೋಕ್ ಮಾಡಿರುವ ಟ್ವೀಟ್ನಲ್ಲಿ ಏನಿದೆ?
ಕಾಂಗ್ರೆಸ್ ಸರ್ಕಾರದ ಮತ್ತೊಂದು ಬಹುಪ್ರಚಾರಿತ ಭರವಸೆ ನೆಲಕಚ್ಚಿದೆ. ಬಡ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಜೊತೆಗೆ ತೊಗರಿಬೇಳೆ, ಅಡುಗೆ ಎಣ್ಣೆ, ಉಪ್ಪು, ಸಕ್ಕರೆ ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳನ್ನು ಒಳಗೊಂಡ 'ಇಂದಿರಾ ಕಿಟ್' ನೀಡುವುದಾಗಿ ರಾಜ್ಯದ ಜನತೆಗೆ ಭರವಸೆ ನೀಡಲಾಗಿತ್ತು. ಆದರೆ ಯೋಜನೆ ಜಾರಿಯಾಗುವ ಮೊದಲೇ ಕೈಬಿಡಲಾಗಿದೆ ಎಂಬ ವರದಿಗಳು ಸರ್ಕಾರದ ಅಸಮರ್ಥತೆ, ದಿವಾಳಿತನ ಮತ್ತು ಆಡಳಿತ ವೈಫಲ್ಯವನ್ನು ಬಯಲಿಗೆಳೆದಿವೆ.
ಘೋಷಣೆ ಜೋರಾಗಿತ್ತು... ಅನುಷ್ಠಾನ ಮಾತ್ರ ಶೂನ್ಯ!
ವರದಿಗಳ ಪ್ರಕಾರ, ಟೆಂಡರ್ ಪ್ರಕ್ರಿಯೆ ವಿವಾದ, ಆಡಳಿತಾತ್ಮಕ ಗೊಂದಲ ಮತ್ತು ಭಾರೀ ವಿಳಂಬದ ನಡುವೆ ಸಿಲುಕಿ, ಎಂಟು ತಿಂಗಳಾದರೂ ಅಂತಿಮಗೊಳ್ಳಲಿಲ್ಲ. ಈಗ ಇಡೀ ಯೋಜನೆಯನ್ನೇ ಕೈಬಿಟ್ಟಿರುವುದು, ನಾಡಿನ ಕೋಟ್ಯಂತರ ಬಡ ಕುಟುಂಬಗಳ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ.
* ಟೆಂಡರ್ ಪ್ರಕ್ರಿಯೆಯಲ್ಲಿನ ಗೊಂದಲಗಳಿಗೆ ಯಾರು ಹೊಣೆ?
* ಘೋಷಿಸಿದ ಯೋಜನೆಯನ್ನು ಜಾರಿಗೊಳಿಸುವ ಸಾಮರ್ಥ್ಯವೇ ಸರ್ಕಾರಕ್ಕೆ ಇರಲಿಲ್ಲವೇ?
* 1.25 ಕೋಟಿ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ನೀಡುವ ಮಾತು ಕೊಟ್ಟ ಸರ್ಕಾರ, ಈಗ ಆ ಮಾತಿನಿಂದ ಏಕೆ ಹಿಂದೆ ಸರಿಯಿತು?
* ಗ್ಯಾರಂಟಿಗಳ ಹೆಸರಿನಲ್ಲಿ ಬೊಕ್ಕಸ ಖಾಲಿ ಮಾಡಿ, ಈಗ ಬಡವರ ಹೊಟ್ಟೆಯ ಮೇಲೆಯೇ ತಣ್ಣೀರು ಬಟ್ಟೆ ಹಾಕುತ್ತಿದ್ದೀರಾ?
ಸಿಎಂ ಡಿ.ಕೆ. ಶಿವಕುಮಾರ್ ಅವರೇ, ಇದು ಕೇವಲ ಒಂದು ಯೋಜನೆ ರದ್ದಾಗಿರುವ ವಿಷಯವಲ್ಲ. ಇದು ನಿಮ್ಮ ಸರ್ಕಾರದ ಆಡಳಿತ ವೈಫಲ್ಯ, ಆರ್ಥಿಕ ದಿವಾಳಿತನ ಮತ್ತು ಕೊಟ್ಟ ಮಾತಿಗೆ ಬೆಲೆ ಇಲ್ಲದ ವಚನ ಭ್ರಷ್ಟ, ವಿಶ್ವಾಸಘಾತುಕ ರಾಜಕಾರಣಕ್ಕೆ ಜೀವಂತ ಸಾಕ್ಷಿ. ಮೊದಲು ಭರ್ಜರಿಯಾಗಿ ಘೋಷಣೆ ಮಾಡಿ, ಬಳಿಕ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪ್ರಚಾರ ಪಡೆದು, ಕೊನೆಗೆ ಮೌನವಾಗಿ ಯೋಜನೆಗೆ ಕತ್ತರಿ ಹಾಕಿದ್ದೀರಿ. ಇದೇನಾ ನಿಮ್ಮ "ಕರ್ನಾಟಕ ಮಾದರಿ"? ಎಂದು ಪ್ರಶ್ನೆ ಮಾಡಿರುವ ಅಶೋಕ್, ಜನರ ವಿಶ್ವಾಸದೊಂದಿಗೆ ಆಟವಾಡಿ, ಬಡವರ ಹೆಸರಿನಲ್ಲಿ ರಾಜಕೀಯ ಮಾಡಿ, ಕೊನೆಗೆ ಅವರ ಪಾಲಿನ ಯೋಜನೆಗಳನ್ನೇ ಕೈಬಿಡುವ ಸರ್ಕಾರಕ್ಕೆ ಜನತಾ ನ್ಯಾಯಾಲಯದಲ್ಲೇ ಉತ್ತರ ಸಿಗಲಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಘೋಷಣೆ ಬೆಟ್ಟದಷ್ಟಿದೆ ಆದರೆ, ಸಾಧನೆ ಮಾತ್ರ ಶೂನ್ಯ, ಭರವಸೆ ಕಾಂಗ್ರೆಸ್‌ನದು ಆದರೆ, ಮೋಸ ಮಾತ್ರ ಬಡವರ ಪಾಲು ಎಂದಿರುವ ಅಶೋಕ್, ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸಮಯ ಬಂದಾಗ ಈ ಜನವಿರೋಧಿ, ವಿಶ್ವಾಸಘಾತುಕ ಆಡಳಿತಕ್ಕೆ ಮತಪೆಟ್ಟಿಗೆ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅಶೋಕ್ ಕಿಡಿಕಾರಿದ್ದಾರೆ.