IndiGo 
ರಾಜ್ಯ

ಇಂಡಿಗೋ ವಿಮಾನಗಳ ಹಾರಾಟ ಭಾಗಶಃ ಸುಧಾರಣೆ-IndiGo

ಹರೀಶ್​​ ಕೆ.ಸಿ.
ಬೆಂಗಳೂರು:ಸತತ 6 ದಿನಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯತ್ಯಯ ಉಂಟಾಗಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನಗಳ ಸಂಚಾರ ಸೋಮವಾರ ಭಾಗಶಃ ಸುಧಾರಿಸಿದೆ.
ಬೆಂಗಳೂರಿಂದ, ದೆಹಲಿ ಮತ್ತು ಮುಂಬೈ ಸೇರಿ ದೇಶದ ವಿವಿಧ ನಗರಗಳಿಗೆ ಇಂಡಿಗೋ ವಿಮಾನಗಳ ಹಾರಾಟ ಬೆಳಗ್ಗೆಯಿಂದಲೇ ಪುನರಾರಂಭಗೊಂಡಿತು. ವಾರಾಂತ್ಯ ಮುಗಿದ ಪರಿಣಾಮ ತುರ್ತು ಕಾರ್ಯ ಮತ್ತು ಅಂತಾರಾಜ್ಯಗಳಿಗೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಟರ್ಮಿನಲ್-1 ಮುಂಭಾಗದಲ್ಲಿ ಜನಸಂದಣಿ ಹೆಚ್ಚಾಗಿದೆ.ಡಿಜಿ ಯಾತ್ರಾ ಸಾಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿದೆ.
ನಿರ್ಗಮನ ದ್ವಾರದ ಮುಂದೆ ಟಿಕೆಟ್ ಹಿಡಿದು ಸರದಿ ಸಾಲಿನಲ್ಲಿ ಪ್ರಯಾಣಿಕರು ನಿಂತಿರುವ ದೃಶ್ಯ ಕಂಡುಬಂತು. ವಿಮಾನ ನಿಲ್ದಾಣದ ಸಿಬ್ಬಂದಿ 2 ಗಂಟೆ ಮುಂಚಿತವಾಗಿ ಮಾತ್ರ ಪ್ರವೇಶಿಸಲು ಅವಕಾಶ ನೀಡುತ್ತಿದ್ದಾರೆ.
ಭಾನುವಾರ ಸಂಜೆಯಿಂದಲೇ ಪ್ರಯಾಣಿಕರು ಆಗಮಿಸುವವರ ಸಂಖ್ಯೆ ಜಾಸ್ತಿಯಾಯಿತು. ಮುಂದಿನ 2 ದಿನದಲ್ಲಿ ಸಂಪೂರ್ಣವಾಗಿ ವಿಮಾನಗಳ ಕಾರ್ಯಾಚರಣೆ ಶುರುವಾಗುವ ನಿರೀಕ್ಷೆ ಇದೆ ಎಂದು ಬೆಂಗಳೂರು ಏರ್‌ಪೋರ್ಟ್ ಮೂಲಗಳು ತಿಳಿಸಿವೆ.
ಆದರೂ, ದೇಶದ ಪ್ರಮುಖ ನಗರಗಳ ವಿಮಾನ ನಿಲ್ದಾಣಗಳಿಂದ ಕಾರ್ಯಾಚರಣೆ ನಡೆಸಬೇಕಿದ್ದ 500ಕ್ಕೂ ಅಧಿಕ ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿವೆ. ದೆಹಲಿ, ಬೆಂಗಳೂರು ವಿಮಾನ ನಿಲ್ದಾಣಗಳಿಂದ ಕಾರ್ಯಾಚರಣೆ ನಡೆಸಬೇಕಿದ್ದ 250 ವಿಮಾನಗಳು ರದ್ದಾಗಿವೆ ಎಂದು ವರದಿಯಾಗಿದೆ. ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ 75 ನಿರ್ಗಮನ, 59 ಆಗಮನ ಒಳಗೊಂಡು 134 ವಿಮಾನಗಳ ಹಾರಾಟ ರದ್ದಾದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 65 ಆಗಮನ ಹಾಗೂ 62 ನಿರ್ಗಮನ ಸೇರಿ 117 ಇಂಡಿಗೊ ವಿಮಾನಗಳ ಹಾರಾಟ ರದ್ದಾಗಿವೆ.
ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, 138 ಸ್ಥಳಗಳ ಪೈಕಿ 137 ಸ್ಥಳಗಳಿಗೆ 1,802 ವಿಮಾನಗಳು ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ.ದಟ್ಟವಾದ ಮಂಜು ಕವಿದ ಹಿನ್ನೆಲೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 20ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ವಿಳಂಬವಾಯಿತು.
ಏರ್ ಆಂಬುಲೆನ್ಸ್ ದರವೂ ಹೆಚ್ಚಳ:
ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದ ಪರಿಣಾಮ ಇತರ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರ ಹೆಚ್ಚಳ ಮಾಡಿದ್ದವು. ಇದೀಗ,ಏರ್ ಆಂಬುಲೆನ್ಸ್‌ಗಳ ದರವೂ ಏರಿಕೆಯಾಗಿದೆ. ಇದರಿಂದಾಗಿ ಹೊರ ರಾಜ್ಯ ಮತ್ತು ರಾಷ್ಟ್ರಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ಬೇರೆ ದಾರಿ ಇಲ್ಲದೆ ಕೆಲ ರೋಗಿಗಳು ಹೆಚ್ಚಿನ ಹಣ ಪಾವತಿವಂತಾಗಿದೆ.
ಪ್ರಯಾಣಿಕರಿಗೆ ತುಸು ನೆಮ್ಮದಿ:
ಇಂಡಿಗೋ ವಿಮಾನಯಾನ ಸಂಸ್ಥೆಯು ಕೇಂದ್ರ ಸರ್ಕಾರ ಕ್ರಮ ಮತ್ತು ಪ್ರಯಾಣಿಕರ ಆಕ್ರೋಶವನ್ನು ಏಕಕಾಲಕ್ಕೆ ಎದುರಿಸುತ್ತಿದೆ. ಪೈಲೆಟ್‌ಗಳ ದುಡಿಮೆ ಹಾಗೂ ವಿಶ್ರಾಂತಿ ಸಮಯಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಯಲದ ನೂತನ ನಿಯಮದಿಂದ ಡಿ.2ರಿಂದ ಸಮಸ್ಯೆ ಉಂಟಾಯಿತು. ವಿಮಾನಗಳ ಹಾರಾಟದಲ್ಲಿ ವಿಳಂಬ ಮತ್ತು ರದ್ದು ಸೇರಿ ಇತ್ಯಾದಿ ಎಡವಟ್ಟುಗಳಿಂದ ದೇಶದ ಪ್ರಮುಖ ವಿಮಾನ ನಿಲ್ದಾಣದಲ್ಲಿ ಕೋಲಾಹಲ ಉಂಟಾಯಿತು. ಲಕ್ಷಾಂತರ ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಯಿತು. ಇದೀಗ ಹಂತ ಹಂತವಾಗಿ ಸಹಜ ಸ್ಥಿತಿಗೆ ಇಂಡಿಗೋ ವಿಮಾನಗಳ ಹಾರಾಟ ಮರಳುತ್ತಿರುವುದು ಪ್ರಯಾಣಿಕರಿಗೆ ತುಸು ನೆಮ್ಮದಿ ತಂದಿದೆ.