ಆನ್​ಲೈನ್​ನಲ್ಲಿ ಆರತಕ್ಷತೆಯಲ್ಲಿ ಪಾಲ್ಗೊಂಡ ನವದಂಪತಿ 
ರಾಜ್ಯ

ಇಂಡಿಗೋ ವಿಮಾನ ರದ್ದು : ಆನ್​ಲೈನ್​ನಲ್ಲಿ ಆರತಕ್ಷತೆ, ವಿಡಿಯೋ ಕಾಲ್​ನಲ್ಲಿ ಶುಭ ಹಾರೈಕೆ! IndiGo Flight

ಪ್ರಮುಖ ಮುಖ್ಯಾಂಶಗಳು

  • ದೇಶಾದ್ಯಂತ ಸುಮಾರು 500ಕ್ಕೂ ಅಧಿಕ ಇಂಡಿಗೋ ವಿಮಾನಗಳ ಹಾರಾಟ ರದ್ದು
  • ಮಂಟಪಕ್ಕೆ ಬರಲಾಗದೇ ಆನ್​ಲೈನ್​ ಮೂಲಕವೇ ಆರತಕ್ಷತೆಯಲ್ಲಿ ಪಾಲ್ಗೊಂಡ ನವದಂಪತಿ
  • ವಧುವಿನ ತವರೂರು ಹುಬ್ಬಳ್ಳಿಯಲ್ಲಿ ಬುಧವಾರ ಔಪಚಾರಿಕವಾಗಿ ನಡೆದ ಆರತಕ್ಷತೆ
ಬೆಂಗಳೂರು: ದೇಶಾದ್ಯಂತ ಇಂಡಿಗೋ ವಿಮಾನಗಳ ( IndiGo Flight ) ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ ವಿಮಾನ ಸೇವೆಗಳಲ್ಲಿ ಭಾರೀ ವ್ಯತ್ಯಯ ಉಂಟಾಗಿರುವ ಪರಿಣಾಮ ಸಕಾಲಕ್ಕೆ ತಮ್ಮ ಆರತಕ್ಷತೆಗೆ ಆಗಮಿಸಲು ಸಾಧ್ಯವಾಗದೇ ನವಜೋಡಿಯೊಂದು ಆನ್​ಲೈನ್​ ಮೂಲಕವೇ ಆರತಕ್ಷತೆಯಲ್ಲಿ ಪಾಲ್ಗೊಂಡಿತು. ಈ ಅಪರೂಪದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ ಮೂಲದ ಮೇಧಾ ಕ್ಷೀರಸಾಗರ್ ಮತ್ತು ಒಡಿಶಾದ ಭುವನೇಶ್ವರ ಮೂಲದ ಸಂಗಮ ದಾಸ್​ ಇಬ್ಬರು ಸಾಫ್ಟ್​ವೇರ್​ ಇಂಜಿನಿಯರ್​ಗಳಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ಮದುವೆ ಸಮಾರಂಭ, ಹುಬ್ಬಳ್ಳಿಯ ಗುಜರಾತ್​ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ನವೆಂಬರ್​ 23ರಂದು ಈ ಜೋಡಿ ಭುವನೇಶ್ವರದಲ್ಲಿ ಮದುವೆಯಾಗಿತ್ತು. ಬುಧವಾರ ವಧುವಿನ ತವರೂರಿನಲ್ಲಿ ಔಪಚಾರಿಕ ಆರತಕ್ಷತೆಯನ್ನು ಏರ್ಪಡಿಸಲಾಗಿತ್ತು.
ಆದರೆ, ಡಿಜಿಸಿಎ ಪರಿಚಯಿಸಿರುವ ಹೊಸ ನಿಯಮಗಳಿಂದಾಗಿ ಪೈಲಟ್​ಗಳ ಸಂಖ್ಯೆಯಲ್ಲಿ ಭಾರಿ ಕೊರತೆಯನ್ನು ಎದುರಿಸುತ್ತಿರುವ ಇಂಡಿಗೋ ತನ್ನ ಬಹುತೇಕ ವಿಮಾನಗಳ ಹಾರಾಟವನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ ವಿಮಾನ ಸೇವೆಯಲ್ಲಿ ಬಿಕ್ಕಟ್ಟು ಉಂಟಾಗಿದೆ. ಇದರ ಪರಿಣಾಮ ನವಜೋಡಿಯ ಮೇಲೂ ಬಿದ್ದಿದ್ದು, ಇಬ್ಬರು ನಿಗದಿತ ಸಮಯಕ್ಕೆ ಆರತಕ್ಷತೆಗೆ ಬರಲು ಸಾಧ್ಯವಾಗಲಿಲ್ಲ.
ಡಿಸೆಂಬರ್ 2ರಂದು ಭುವನೇಶ್ವರದಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿನಿಂದ ಹುಬ್ಬಳ್ಳಿಗೆ ಟಿಕೆಟ್ ಬುಕ್ ಮಾಡಿದ್ದ ನವ ವಧು-ವರರು, ಮಂಗಳವಾರ ಬೆಳಗ್ಗೆ 9 ಗಂಟೆಯಿಂದ ಮರುದಿನ ಬೆಳಗಿನ ಜಾವದವರೆಗೆ ವಿಮಾನಗಳು ಪದೇಪದೆ ವಿಳಂಬವಾದ ಕಾರಣ ವಿಮಾನ ನಿಲ್ದಾಣದಲ್ಲೇ ಸಿಲುಕಿಕೊಂಡರು. ಅಂತಿಮವಾಗಿ ಡಿಸೆಂಬರ್ 3 ರಂದು ಅವರು ಪ್ರಯಾಣಿಸಬೇಕಾದ ವಿಮಾನ ಪ್ರಯಾಣವನ್ನೇ ಇಂಡಿಗೋ ರದ್ದುಗೊಳಿಸಿತು.
ವಧು-ವರರು ಮಾತ್ರವಲ್ಲ ಭುವನೇಶ್ವರ-ಮುಂಬೈ-ಹುಬ್ಬಳ್ಳಿ ಮೂಲಕ ಪ್ರಯಾಣಿಸಬೇಕಿದ್ದ ಹಲವಾರು ಸಂಬಂಧಿಕರು ಸಹ ವಿಮಾನ ರದ್ದತಿ ಪರಿಣಾಮವನ್ನು ಎದುರಿಸಿದರು. ಇದರ ನಡುವೆ ಈಗಾಗಲೇ ಮಂಟಪಕ್ಕೆ ಜಮಾಯಿಸಿ ಆರತಕ್ಷತೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ವಧುವಿನ ಪೋಷಕರು ಆನ್​ಲೈನ್​ನಲ್ಲೇ ಆರತಕ್ಷತೆ ಮಾಡಿದರು. ಅತ್ತ ವಧು-ವರರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆರತಕ್ಷತೆಯಲ್ಲಿ ಭಾಗವಹಿಸಿದರು.
ನವೆಂಬರ್ 23ರಂದು ಭುವನೇಶ್ವರದಲ್ಲಿ ಮದುವೆ ನಡೆದಿತ್ತು. ಡಿಸೆಂಬರ್ 3ರಂದು ಆರತಕ್ಷತೆ ನಡೆಸಲು ನಾವು ಯೋಜಿಸಿದ್ದೆವು. ಆದರೆ, ಇದ್ದಕ್ಕಿದ್ದಂತೆ, ಬೆಳಗ್ಗೆ 4 ಗಂಟೆಗೆ ವಿಮಾನ ರದ್ದಾಯಿತು. ನವದಂಪತಿ ಬರುತ್ತಾರೆಂದು ನಾವು ಆಶಿಸಿದ್ದೆವು. ಆದರೆ, ಅವರಿಗೆ ಸಾಧ್ಯವಾಗಲಿಲ್ಲ. ನಾವು ನಮ್ಮ ಅನೇಕ ಸಂಬಂಧಿಕರನ್ನು ಆರತಕ್ಷತೆಗೆ ಆಹ್ವಾನಿಸಿದ್ದರಿಂದ ನಮಗೆ ತುಂಬಾ ಬೇಸರವಾಯಿತು. ಅಲ್ಲದೆ, ಕೊನೆಯ ಕ್ಷಣದಲ್ಲಿ ಕಾರ್ಯಕ್ರಮವನ್ನು ರದ್ದುಗೊಳಿಸುವುದು ನಮ್ಮಿಂದ ಅಸಾಧ್ಯವಾಗಿತ್ತು. ಆದ್ದರಿಂದ, ನಮ್ಮ ಕುಟುಂಬ ಚರ್ಚಿಸಿ, ಆನ್​ಲೈನ್​ ಮೂಲಕ ಆರತಕ್ಷತೆಯನ್ನು ಮಾಡಿದೆವು ಎಂದು ವಧುವಿನ ತಾಯಿ ತಿಳಿಸಿದರು.
ಅಂದಹಾಗೆ, ದೇಶದ ಅತಿದೊಡ್ಡ ವಿಮಾನ ಸಂಸ್ಥೆ ಎಂಬ ಹೆಸರಿಗೆ ಭಾಜನವಾಗಿರುವ ಇಂಡಿಗೋ ಏರ್​ಲೈನ್ಸ್​ನ ( IndiGo Flights ) ಬಿಕ್ಕಟ್ಟು ಹಾಗೇ ಮುಂದುವರಿದಿದ್ದು ದೇಶಾದ್ಯಂತ ಅನೇಕ ವಿಮಾನ ನಿಲ್ದಾಣಗಳು ಅವ್ಯವಸ್ಥೆಯ ಆಗರವಾಗಿವೆ. ಸುಮಾರು 12 ಗಂಟೆಗಳಿಂದ ಊಟ ನೀರು ಇಲ್ಲದೇ ತಮ್ಮ ಲಗೇಜುಗಳನ್ನು ಮರಳಿ ಪಡೆಯುವುದಕ್ಕಾಗಿ ಪ್ರಯಾಣಿಕರು ಪರದಾಡುತ್ತಿದ್ದಾರೆ. ಈ ಬಿಕ್ಕಟ್ಟು ಸತತ ನಾಲ್ಕನೇ ದಿನವೂ ಮುಂದುವರೆದಿವೆ. ಸುಮಾರು 20 ವರ್ಷ ಇತಿಹಾಸ ಹೊಂದಿರುವ ದೇಶ ಅತಿದೊಡ್ಡ ವಿಮಾನಯಾನ ಸಂಸ್ಥೆ ಪ್ರಸ್ತುತ ಭಾರಿ ಬಿಕ್ಕಟ್ಟು ಎದುರಿಸುತ್ತಿದೆ. ಕ್ಯಾಬಿನ್ ಸಿಬ್ಬಂದಿ ಸಮಸ್ಯೆಗಳು ಮತ್ತು ತಂತ್ರಜ್ಞಾನ ಸಮಸ್ಯೆಗಳು ಸೇರಿದಂತೆ ಹಲವಾರು ಕಾರಣಗಳಿಂದಾಗಿ 550 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಇವುಗಳಲ್ಲಿ, ಮುಂಬೈ ವಿಮಾನ ನಿಲ್ದಾಣದಲ್ಲಿ 104, ದೆಹಲಿ ವಿಮಾನ ನಿಲ್ದಾಣದಲ್ಲಿ 225, ಬೆಂಗಳೂರಿನಲ್ಲಿ 102 ಮತ್ತು ಹೈದರಾಬಾದ್‌ನಲ್ಲಿ 92 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಭೋಪಾಲ್ ವಿಮಾನ ನಿಲ್ದಾಣದಲ್ಲಿ ಕನಿಷ್ಠ ಐದು ವಿಮಾನಗಳನ್ನು ರದ್ದುಗೊಳಿಸಲಾಗಿದೆ, (ಏಜೆನ್ಸೀಸ್​).