ದಾಬಸ್ಪೇಟೆ ವಿಕೇರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಎಐ ಮತ್ತು ರೋಬಾಟಿಕ್ಸ್ ಘಟಕವನ್ನು ಸಿಐಎಸ್ಎಫ್ನ ಸಬ್ಇನ್ಸ್ಪೆಕ್ಟರ್ ವಿಕಾಸ್ ಕುಮಾರ್ ಉದ್ಘಾಟಿಸಿದರು. ಪ್ರಾಂಶುಪಾಲೆ ಶಿಲ್ಪಾ, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಸ್ವರ್ಣಾಂಭ, ಶಿಕ್ಷಕರು, ಮಕ್ಕಳು ಇದ್ದರು.
ದಾಬಸ್ಪೇಟೆ : ದೇಶ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಇತರ ದೇಶಗಳಿಗೆ ಪೈಪೋಟಿ ನೀಡುತ್ತಿದೆ ಎಂದು ಸಿಐಎಸ್ಎಫ್ನ ಸಬ್ಇನ್ಸ್ಪೆಕ್ಟರ್ ವಿಕಾಸ್ ಕುಮಾರ್ ಹೇಳಿದರು.
ಪಟ್ಟಣದ ವಿಕೇರ್ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಆಧುನಿಕ ಶಿಕ್ಷಣ ಮತ್ತು ಮುಂಚೂಣಿಯಲ್ಲಿ ಎಐ ಮತ್ತು ರೋಬಾಟಿಕ್ಸ್ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿಯೂ ಹೆಚ್ಚು ಸೌಲಭ್ಯ ನೀಡುತ್ತಿರುವ ವಿಕೇರ್ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಉತ್ತಮ ಅವಕಾಶ ನೀಡುತ್ತಿದೆ. ಮಕ್ಕಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮಕ್ಕಳು ಶಿಕ್ಷಣದೊಂದಿಗೆ ದೇಶಾಭಿಮಾನ ಹೊಂದಬೇಕು. ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬೇಕು ಎಂಬ ಸಂಕಲ್ಪದೊಂದಿಗೆ ವ್ಯಾಸಾಂಗ ಮಾಡಿ ಸ್ವಾವಲಂಬಿಯಾಗಿ ಜೀವಿಸುವ ನಿರ್ಧಾರ ಮಾಡಬೇಕು ಎಂದು ಹೇಳಿದರು.
ಶಾಲೆ ಸಂಸ್ಥಾಪಕ ರಾಜಶೇಖರ್ ಮಾತನಾಡಿ, ಶಾಲೆಯಲ್ಲಿ ಎಐ ಮತ್ತು ರೋಬಾಟಿಕ್ಸ್ ತರಗತಿ ಆರಂಭಿಸಲಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಹೊಸದಾಗಿ ಬರುವ ಪ್ರತಿ ವಿಚಾರಗಳನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.