ಬೆಂಗಳೂರು: ವಿಶ್ವದಲ್ಲೇ ಭಾರತ 3ನೇ ಅತಿದೊಡ್ಡ ಆರ್ಥಿಕತೆ ರಾಷ್ಟ್ರವಾಗಿ ಹೊರಹೊಮ್ಮಲು ಡಿಜಿಟಲ್, ಭೌತಿಕ ಮೂಲಸೌಕರ್ಯ ಮತ್ತು ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಅವಶ್ಯಕತೆ ಇದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ಶಾಸ್ತ್ರ ಡೀಮ್ಡ್ ವಿಶ್ವವಿದ್ಯಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, 2030ರ ವೇಳೆಗೆ ಭಾರತದ ಒಟ್ಟು ಆರ್ಥಿಕತೆ ಶೇ. 20ಕ್ಕೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಅಂತಾರಾಷ್ಟ್ರೀಯ ಆರ್ಥಿಕ ಸಂಬಂಧಗಳ ಸಂಶೋಧನಾ ಮಂಡಳಿ (ಐಸಿಆರ್‌ಐಇಆರ್) ನಡೆಸಿದ್ದ ಅಧ್ಯಯನದಲ್ಲಿ ತಿಳಿದುಬಂದಿದೆ. ದೇಶದಲ್ಲಿ ಡಿಜಿಟಲ್ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂದರು.
ಎಲೆಕ್ಟ್ರಾನಿಕ್ಸ್ ಘಟಕಗಳ ತಯಾರಿಕೆಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ 2025ರ ಹಣಕಾಸು ವರ್ಷದಲ್ಲಿ ರ್ತು ಪ್ರಮಾಣವು ಅಂದಾಜು 40 ಬಿಲಿಯನ್ ಡಾಲರ್ ತಲುಪಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಐಟಿ, ಐಇಎಸ್ ಮಾರುಕಟ್ಟೆಯು 2030ರ ವೇಳೆಗೆ 1 ಟ್ರಿಲಿಯನ್ ಡಾಲರ್ ತಲುಪುವ ಸಾಧ್ಯತೆ ಇದೆ ಎಂದು ಹೇಳಿದ ಎಸ್. ಕೃಷ್ಣನ್, ಬಜಾಜ್ ಆಟೋ, ಟಾಟಾ ಎಲೆಕ್ಟ್ರಾನಿಕ್ಸ್, ಬ್ರೇಕ್ಸ್ ಇಂಡಿಯಾ ಸೇರಿ ಮುಂತಾದ ಉದ್ಯಮ ಪಾಲುದಾರಿಕೆ ಹೊಂದಿದ್ದಕ್ಕಾಗಿ ಶಾಸ್ತ್ರ ಡೀಮ್ಡ್ ವಿಶ್ವವಿದ್ಯಾಲಯ ಕಾರ್ಯವನ್ನು ಶ್ಲಾಘಿಸಿದರು.
ವಿವಿಧ ಕ್ಷೇತ್ರಗಳ ಸಾಮರ್ಥ್ಯ ವೃದ್ಧಿಗಾಗಿ ವಿಶ್ವವಿದ್ಯಾಲಯ, ‘ಬಜಾಜ್ ಆಟೋ ಬಜಾಜ್ ಇಂಜಿನಿಯರಿಂಗ್ ಕೌಶಲ ತರಬೇತಿ ಕೇಂದ್ರ ಸ್ಥಾಪಿಸಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕಾರ್ಯಕ್ರಮಗಳ ಕುರಿತು ಕೆಲ ಕಂಪನಿಗಳು, ವಿವಿ ಜೊತೆ ಒಪ್ಪಂದ ಮಾಡಿಕೊಂಡಿವೆ. ಶಾಸ್ತ್ರ ಡೀಮ್ಡ್ ವಿವಿ ಕುಲಪತಿ ಡಾ.ಎಸ್.ವೈದ್ಯಸುಬ್ರಮಣ್ಯಂ ಉಪಸ್ಥಿತರಿದ್ದರು.