ಹಂಚಿನಾಳ ಗ್ರಾಪಂ ಎದುರು ಕುಡಿಯುವ ನೀರಿಗಾಗಿ ಗ್ರಾಮಸ್ಥರು ತಲೆ ಮೇಲೆ ಖಾಲಿ ಕೊಡ ಹೊತ್ತು ಪ್ರತಿಭಟನೆ ನಡೆಸಿದರು. ಮಂಜು ಜಟ್ಟೆನ್ನವರ, ಬಸನಗೌಡ ಪಾಟೀಲ, ಬಸು ಹುಲಗೆನ್ನವರ ಇತರರಿದ್ದರು. 
ರಾಜ್ಯ

ಹಂಚಿನಾಳದಲ್ಲಿ ಹೆಚ್ಚಿದ ಜಲ ಸಂಕಷ್ಟ

ಸವದತ್ತಿ: ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಂಗಳವಾರ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರು ಹಾಗೂ ಜಲಜೀವನ ಮಿಷನ್​ ಯೋಜನೆಗಳು ಜಾರಿಯಲ್ಲಿದ್ದರೂ, ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಬೇಸಿಗೆ ಆರಂಭ ವಾಗುತ್ತಿದ್ದಂತೆ ನೀರಿನ ತತ್ವಾರ ಹೆಚ್ಚಾಗಿದ್ದು ಎರಡು ವರ್ಷಗಳಿಂದ ಇದೇ ಸಮಸ್ಯೆ ಮುಂದುವರಿದಿದೆ ಎಂದು ಗ್ರಾಮಸ್ಥರು ದೂರಿದರು. ಮಂಜು ಜಟ್ಟೆನ್ನವರ, ಬಸನಗೌಡ ಪಾಟೀಲ ಹಾಗೂ ಬಸು ಹುಲಗೆನ್ನವರ ಮಾತನಾಡಿದರು.
ಗ್ರಾಮೀಣ ನೀರು ಪೂರೈಕೆ ಇಲಾಖೆ ಎಇಇ ಪ್ರೇಮ ರಾಠೋಡ್​ ಮಾತನಾಡಿ, ಉಗರಗೋಳ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಕೆಯಾಗುವ ಪೈಪ್​ಗಳಲ್ಲಿ ಸೋರಿಕೆಯಾಗುತ್ತಿದ್ದು, ಅವುಗಳನ್ನು ಸರಿಪಡಿಸಿ, 2 ಗಂಟೆವರೆಗೆ ನೀರು ಪೂರೈಕೆ ಅವಧಿ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು. ಪಿಡಿಒ ದೇವೇಂದ್ರ ಆನೂರ, ಗ್ರಾಮಸ್ಥರಾದ ಮಂಜು ಮೆಟ್ಟಿನ, ಸಂಜು ಗಾಣಗೇರ, ಉಮೇಶ ತಿರ್ಲಾಪೂರ, ಮಹಿಳೆಯರು ಗ್ರಾಮಸ್ಥರು ಇದ್ದರು.