Increased obstruction due to unscientific humps
ಚೇಳೂರು: ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಚೇಳೂರಿನಿಂದ ಚಿಂತಾಮಣಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆ ಹಂಪ್ಗಳು ವಾಹನ ಸವಾರರಿಗೆ ಭಾರಿ ತೊಂದರೆ ಉಂಟುಮಾಡುತ್ತಿವೆ.
ಸುಮಾರು 400 ಮೀಟರ್ ದೂರದ ರಸ್ತೆಯೊಳಗೆ 3 ಕಡೆ ಒಟ್ಟು 9 ಹಂಪ್ ನಿರ್ಮಿಸಿರುವುದರಿಂದ ದಿನನಿತ್ಯ ಸಂಚರಿಸುವ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ರಸ್ತೆಯಲ್ಲಿ ಅತಿಯಾದ ಹಂಪ್ ನಿರ್ಮಿಸಿರುವುದರಿಂದ ವಾಹನಗಳು ಆಗಾಗ್ಗೆ ಬ್ರೇಕ್ ಹಾಕಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಪರಿಣಾಮವಾಗಿ ಬೈಕ್, ಕಾರು ಸೇರಿ ಹಲವು ವಾಹನಗಳ ಭಾಗಗಳು ಹಾನಿಗೊಳಗಾಗುತ್ತಿದ್ದು, ವಾಹನಗಳನ್ನು ರಿಪೇರಿ ಮಾಡಿಸಲು ಸವಾರರು ವೆಚ್ಚ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸ್ಥಳಿಯ ವಾಹನ ಸವಾರರು ಮತ್ತು ಗ್ರಾಮಸ್ಥರು ಹೇಳುವಂತೆ, ವೈಜ್ಞಾನಿಕ ಮಾನದಂಡ ಪಾಲಿಸದೆ ಹಂಪ್ಗಳನ್ನು ನಿರ್ಮಿಸಲಾಗಿದೆ. ಸಾಮಾನ್ಯವಾಗಿ ರಸ್ತೆ ಹಂಪ್ಗಳ ನಡುವಿನ ಅಂತರ ಕನಿಷ್ಠ 100 ಮೀಟರ್ ಇರಬೇಕು ಎಂದು ಮಾರ್ಗಸೂಚಿಗಳು ಹೇಳುತ್ತವೆ. ಆದರೆ, ಇಲ್ಲಿ ಅಲ್ಪ ದೂರದಲ್ಲಿ ಹಲವಾರು ಹಂಪ್ಗಳನ್ನು ನಿರ್ಮಿಸಿರುವುದರಿಂದ ಸಂಚಾರ ದುಸ್ತರವಾಗಿದೆ.
ಹಂಪ್ಗಳು ಅತಿಯಾಗಿ ಎತ್ತರವಾಗಿರುವುದರಿಂದ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಅಪಾಯದ ಭೀತಿಯಲ್ಲಿ ಸಂಚರಿಸಬೇಕಾಗಿದೆ.
ಎಷ್ಟೋ ಬಾರಿ ಈ ಹಂಪ್ಗಳಿಂದ ಅಪಘಾತಗಳು ಆಗಿವೆ. ಸಾಕಷ್ಟು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾತ್ರಿ ಸಮಯದಲ್ಲಿ ಸರಿಯಾದ ಗುರುತು ಅಥವಾ ಎಚ್ಚರಿಕೆ ಫಲಕಗಳಿಲ್ಲದ ಕಾರಣ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಯಾವ ಪ್ರಯೋಜನ ಆಗಿಲ್ಲ.
ಸಂಬಂಧಿಸಿದ ಅಧಿಕಾರಿಗಳು ಅವೈಜ್ಞಾನಿಕ ಹಂಪ್ಗಳನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುಕೂಲವಾಗುವಂತೆ ವಾಹನ ಸವಾರರು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
"ಚೇಳೂರುನಿಂದ ಚಿಂತಾಮಣಿ ರಸ್ತೆಯ ಹೊಸಹುಡ್ಯ (ಉಪ್ಪುಕುಂಟಪಲ್ಲಿ) ಗ್ರಾಮದಲ್ಲಿ ಅಧಿಕಾರಿಗಳ ರ್ನಿಲಕ್ಷದಿಂದ ಮೂರು ಕಡೆ ಹಂಪ್ಗಳನ್ನು ಹಾಕಿದ್ದು ಪ್ರಯಾಣಿಕರಿಗೆ ತೊಂದರೆ ಆಗಿದೆ."
> ವೆಂಕಟೇಶ್, ಡೆವರ್ ಚೇಳೂರು
"ಹಂಪ್ಗಳ ಸಮಸ್ಯೆ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ ಇದರ ಬಗ್ಗೆ ಎಇಇ ಅಧಿಕಾರಿಗಳ ಜತೆ ಚರ್ಚಿಸಿ, ಸ್ಥಳಕ್ಕೆ ಪರಿಶಿಲನೆ ಮಾಡಿ ಜನರಿಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಲಾಗುವುದು."
> ಕಲ್ಯಾಣ್ ಕುಮಾರ್, ಕಿರಿಯ ಅಭಿಯಂತರರು ಬಾಗೇಪಲ್ಲಿ