ವಿಶ್ವ ಆಹಾರ ಸುರಕ್ಷತಾ ದಿನ  
ರಾಜ್ಯ

ಹೆಚ್ಚಿದ ಆಹಾರ ಮಾಲಿನ್ಯ: ಅಸುರಕ್ಷಿತ ಪದಾರ್ಥ ಸೇವನೆಗೆ 15 ಲಕ್ಷ ಮಂದಿ ಬಲಿ-world food safety day

ಹರೀಶ್ ಬೇಲೂರು ಬೆಂಗಳೂರು
ಮನುಷ್ಯನ ಉತ್ತಮ ಆರೋಗ್ಯಕ್ಕೆ ಜಲ, ಗಾಳಿ ಎಷ್ಟು ಮುಖ್ಯವೋ ಆಹಾರವೂ ಅಷ್ಟೇ ಅವಶ್ಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಕಳಪೆ, ಅಸುರಕ್ಷಿತ ಆಹಾರ ಸೇವಿಸುತ್ತಿರುವ ಪರಿಣಾಮ ಜನರು ಗಂಭೀರ ಕಾಯಿಲೆಗೆ ಒಳಗಾಗುತ್ತಿದ್ದಾರೆ.
ಆಹಾರದಿಂದ ಹರಡುವ ಅಪಾಯಗಳ ತಡೆಗಟ್ಟುವಿಕೆ, ಪತ್ತೆ ಮತ್ತು ನಿರ್ವಹಣೆಯತ್ತ ಗಮನ ಸೆಳೆಯುವ ಉದ್ದೇಶದಿಂದ ಪ್ರತಿ ವರ್ಷ ಜೂ.7ರಂದು ‘ವಿಶ್ವ ಆಹಾರ ಸುರಕ್ಷತಾ ದಿನವನ್ನು’ ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ (ಎಫ್​​ಎಒ) ಜಾಗತಿಕವಾಗಿ ಆಹಾರ ಸುರಕ್ಷತೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ‘ಹೊರೆಯಿಂದ ಪರಿಹಾರಗಳವರೆಗೆ -ಎಲ್ಲೆಡೆ ಸುರಕ್ಷಿತ ಆಹಾರ’, ಈ ವರ್ಷದ ಥೀಮ್ ಆಗಿದೆ. 2026ರ ಅಭಿಯಾನವು ಆಹಾರದಿಂದ ಹರಡುವ ರೋಗಗಳ ಜಾಗತಿಕ ಹೊರೆ ನಿಭಾಯಿಸಲು ದತ್ತಾಂಶ, ವೈಜ್ಞಾನಿಕ ಪುರಾವೆ ಮತ್ತು ಅಪಾಯ ಆಧಾರಿತ ಪರಿಹಾರ ಬಳಸಿಕೊಳ್ಳುವುದರ ಮೇಲೆ ಕೇಂದ್ರೀಕರಿಸಲಾಗಿದೆ. ಅಸುರಕ್ಷಿತ ಆಹಾರ ಸೇವನೆಯಿಂದ ಪ್ರತಿ ವರ್ಷ ಅಂದಾಜು 15 ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ.
ತರಕಾರಿ, ಸೊಪ್ಪುಗಳಲ್ಲಿ ಸೀಸ ಪತ್ತೆ:
ರಾಜ್ಯದಲ್ಲಿ 7 ಲಕ್ಷಕ್ಕೂ ಅಧಿಕ ಆಹಾರ ಉದ್ದಿಮೆಗಳಿಗೆ ಪರವಾನಗಿ ನೀಡಲಾಗಿದೆ. ಅಂದಾಜು 14 ಲಕ್ಷ ಆಹಾರ ಉದ್ದಿಮೆಗಳು ನೋಂದಣಿ ಮಾಡಿಕೊಂಡಿವೆ. ಸಾರ್ವಜನಿಕರಿಗೆ ಗುಣಮಟ್ಟ ಆಹಾರ ಒದಗಿಸುವುದು ಆಹಾರ ಉದ್ದಿಮೆಗಳ ಕರ್ತವ್ಯ. ಆದರೆ, ಬಹುತೇಕ ಆಹಾರ ಉದ್ದಿಮೆಗಳು ಹಾಗೂ ಹೋಟೆಲ್‌ಗಳಲ್ಲಿ ಆಹಾರ ರುಚಿ ಹೆಚ್ಚಿಸಲು, ಬಣ್ಣದಿಂದ ಆಕರ್ಷಿಸಲು, ಹಣ್ಣು,ತರಕಾರಿ ಆಕರ್ಷಕವಾಗಿ ಕಾಣಲು ರಾಸಾಯನಿಕ ಬಳಸಲಾಗುತ್ತದೆ. ಬೆಣ್ಣೆ, ತುಪ್ಪ, ಹಾಲು, ಮೀನು, ಅಡುಗೆ ಎಣ್ಣೆ ಸೇರಿ ಇತರ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಅಂಶ ಕಂಡುಬರುತ್ತಿದೆ. ಇದರ ಜತೆಗೆ ಬೆಂಗಳೂರು ಸುತ್ತಮುತ್ತ ಬೆಳೆಯುವ ತರಕಾರಿಗಳು ಮತ್ತು ಸೊಪ್ಪುಗಳಲ್ಲೂ ಸೀಸ ಮತ್ತು ಲೋಹದ ಅಂಶ ಕಂಡುಬಂದಿದೆ.
ಆಹಾರ ಮಾದರಿಗಳ ಪರೀಕ್ಷೆ, ದಂಡ
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ಕಳೆದ 3 ವರ್ಷಗಳಲ್ಲಿ 79,125 ವಿವಿಧ ಆಹಾರ ಮಾದರಿ ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಇದರಲ್ಲಿ 700 ಮಾದರಿಗಳು ಅಸುರಕ್ಷಿತ, 686 ಮಾದರಿಗಳು ಕಳಪೆ ಎಂಬುದು ತಿಳಿದು ಬಂದಿದೆ. ಅಸುರಕ್ಷಿತ ಕೇಸ್ ಕಂಡುಬಂದ ಹಿನ್ನೆಲೆ 411 ಕೇಸ್ ದಾಖಲಿಸಿ 50 ಪ್ರಕರಣಗಳಲ್ಲಿ 10.55 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಇನ್ನು ಕಳಪೆ ಆಹಾರ ಎಂದು ವರದಿಯಾದ ಕೇಸ್‌ಗಳಲ್ಲಿ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಹೂಡಿಕೆಯಾದ 526 ಮೊಕದ್ದಮೆಗಳಲ್ಲಿ 400 ಕೇಸ್‌ಗಳು ಇತ್ಯರ್ಥಗೊಂಡು, 74.99 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. 72369 ಆಹಾರ ಉದ್ದಿಮೆದಾರರಿಗೆ ಸುರಕ್ಷತೆ, ಗುಣಮಟ್ಟ ಮತ್ತು ನೈರ್ಮಲ್ಯ ಕುರಿತು ತರಬೇತಿ ನೀಡಲಾಗಿದೆ. ಬೆಂಗಳೂರು ನಗರ, ಬೆಳಗಾವಿ, ಬೀದರ್, ಕೊಪ್ಪಳ, ವಿಜಯಪುರ, ಗದಗ, ಮೈಸೂರು, ಮಂಡ್ಯದಲ್ಲಿ ಅಧಿಕವಾಗಿ ಅಸುರಕ್ಷಿತ, ಕಳಪೆ ಆಹಾರ ಪತ್ತೆ ಕೇಸ್ ದಾಖಲಾಗಿವೆ.
ಆಹಾರ ಕಾಯ್ದೆ ಹೇಳುವುದೇನು?
* ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2011ರ ಆ.5ರಿಂದ ಜಾರಿಗೆ ಬಂದಿದ್ದು, ಮಾರಾಟಗಾರರು ಕಾಯ್ದೆ ನಿಯಮಗಳನ್ನು ಪಾಲಿಸುವುದು ಕಡ್ಡಾಯ.
* ವೈಜ್ಞಾನಿಕ ಗುಣಮಟ್ಟ ನಿಗದಿ
*ಆಹಾರ ತಯಾರಿಕೆ, ಸಂಗ್ರಹ, ವಿತರಣೆ, ಸಗಟು, ಚಿಲ್ಲರೆ ಮಾರಾಟ, ಆಮದು ಸೇರಿ ವಿವಿಧ ಹಂತಗಳಲ್ಲಿ ಉತ್ತಮ ಗುಣಮಟ್ಟ ಆಹಾರ ದೊರೆಯುವಂತೆ ಮಾಡುವುದು
* ಉತ್ಪಾದನೆ, ಸಂಸ್ಕರಣೆ, ವಿತರಣೆ, ಸಾಗಾಣಿಕೆ, ಮಾರಾಟ ಹಂತಗಳಲ್ಲಿ ಸುರಕ್ಷತೆ ಕಾಪಾಡಿಕೊಳ್ಳುವುದು
*ಉತ್ಪಾದನೆಯಿಂದ ಸೇವಿಸುವವರೆಗೆ ಅಹಾರ ಸುರಕ್ಷತೆ ಅರಿವು
* ಆಹಾರ ನೈಸರ್ಗಿಕ ಹಾಗೂ ರಾಸಾಯನಿಕ, ಕಲಬೆರಕೆ ಮುಕ್ತವಾಗಿರಬೇಕು
*ತಯಾರಿಕಾ ಕಂಪನಿಗಳು ನಿಗದಿತ ಮಾನದಂಡ ಅನುಸರಿಸಬೇಕು
* ಕಲಬೆರಕೆ ಮಾಡಿದರೆ 25 ಸಾವಿರ ರೂ.ನಿಂದ 10 ಲಕ್ಷವರೆಗೆ ದಂಡ ಮತ್ತು 2 ತಿಂಗಳಿಂದ 7 ವರ್ಷವರೆಗೆ ಜೈಲು ಶಿಕ್ಷೆ
ಸಹಾಯವಾಣಿಗೆ ಕರೆ ಮಾಡಿ
ಕಳಪೆ ಅಥವಾ ಕಲಬೆರಕೆಯುಕ್ತ ಆಹಾರ, ಆಶುಚಿಯ ವಾತಾವರಣ ಕಂಡುಬಂದಲ್ಲಿ ಸಹಾಯವಾಣಿ 180-0112100 ದೂರು ನೀಡಬಹುದು.