ಆಹಾರ ಸಚಿವ ಕೆ.ಎಚ್. ಮುನಿಯಪ್ಪ
ಬೆಂಗಳೂರು: ಮಧ್ಯಪ್ರಾಚ್ಯ ಸಂಘರ್ಷದಿಂದ ಸಮರ್ಪಕವಾಗಿ ಗ್ಯಾಸ್ ಸಿಗದೆ ತೊಂದರೆ ಅನುಭವಿಸುತ್ತಿರುವ ಆಟೋಚಾಲಕರ ರಕ್ಷಣೆಗೆ ಕೇಂದ್ರ ಸರ್ಕಾರ ಧಾವಿಸಬೇಕು. ಬೇಡಿಕೆಗೆ ತಕ್ಕಂತೆ ಆಟೋ ಎಲ್‌ಪಿಜಿ ಪೂರೈಕೆ ಪ್ರಮಾಣ ಹೆಚ್ಚಿಸಬೇಕು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಆಗ್ರಹಿಸಿದ್ದಾರೆ.
ಐಒಸಿ, ಬಿಪಿಸಿ, ಎಚ್‌ಪಿಸಿ ಮತ್ತು ಗೇಲ್ ಕಂಪನಿಗಳ ಜೊತೆ ಸಭೆ ನಡೆಸಿದ ಬಳಿಕ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಎಲ್‌ಪಿಜಿ ಗ್ಯಾಸ್ ಪೂರೈಕೆಯಲ್ಲಿ ವಿಲವಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯಕ್ಕೆ ಬೇಕಾಗುವಷ್ಟು ಅನಿಲ ಸರಬರಾಜು ಮಾಡಬೇಕು. ಗ್ಯಾಸ್ ಮೇಲೆ ಅವಲಂಬಿಸಿ ಜೀವನ ನಡೆಸುತ್ತಿರುವ ಆಟೋ ಚಾಲಕರಿಗೆ, ಬೇಡಿಕೆ ತಕ್ಕಂತೆ ಆಟೋ ಎಲ್‌ಪಿಜಿ ಪೂರೈಸಲು ಕೇಂದ್ರ ಮುಂದಾಗಬೇಕು. ಈ ಕುರಿತು ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಪತ್ರ ಬರೆಯಲಾಗಿದೆ. ಮತ್ತೊಮ್ಮೆ ಪತ್ರ ಬರೆದು ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡುವುದಾಗಿ ಹೇಳಿದರು.
ಸರ್ಕಾರ ನಿಗದಿಪಡಿಸಿದ ದರದಂತೆ ಖಾಸಗಿ ತೈಲ ಕಂಪನಿಗಳು ಇಂಧನ ವಿತರಿಸಬೇಕು. ಹೆಚ್ಚಿನ ದರಕ್ಕೆ ಪೆಟ್ರೋಲ್, ಡೀಸೆಲ್, ಆಟೋ ಎಲ್‌ಪಿಜಿ ಮಾರಾಟ ಮಾಡುವ ಕಂಪನಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಜಪ್ತಿ ಮಾಡಲಾಗುವುದು. ಕೇಂದ್ರ ಸರ್ಕಾರವು ಹಂಚಿಕೆ ಮಾಡುವ ಇಂಧನವನ್ನು ಗ್ರಾಹಕರಿಗೆ ಸರಬರಾಜು ಮಾಡುತ್ತಿದ್ದೇವೆ. ಇಂಧನ ಪೂರೈಕೆಯ ಜವಾಬ್ದಾರಿ ಮತ್ತು ಅಧಿಕಾರ ಕೇಂದ್ರಕ್ಕೆ ಇದೆ. ಇದರಲ್ಲಿ ನಮ್ಮ ಪಾತ್ರ ಏನು ಇಲ್ಲ. ಬೇಡಿಕೆಗೆ ತಕ್ಕಂತೆ ಗ್ಯಾಸ್ ಹಂಚಿಕೆ ಮಾಡುವಂತೆ ನಿರಂತರವಾಗಿ ಕೇಂದ್ರಕ್ಕೆ ಮನವಿ ಮಾಡುತ್ತಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.
ಸಚಿವರ ಆಪ್ತ ಕಾರ್ಯದರ್ಶಿ ಡಾ.ಎಚ್. ನಟರಾಜ್, ಅನಿಲ ಕಂಪನಿಗಳ ಅಧಿಕಾರಿಗಳಾದ ನೀರಾ ಸಿಂಗ್, ಅರುಂದಿ ಗೊಯಲ್, ದಿವ್ಯ, ಮುರಳಿ ಚಾರ್, ಸುಬ್ರಗ್ ಚಟರ್ಜಿ, ರಾಜೇಶ್‌ಸಿಂಗ್ ಇತರರಿದ್ದರು.
5,30,426 ವಾಣಿಜ್ಯ ಸಿಲಿಂಡರ್ ವಿತರಣೆ
ರಾಜ್ಯದಲ್ಲಿ ಇದುವರೆಗೆ 88,99,796 ಗೃಹ ಬಳಕೆಯ ಸಿಲಿಂಡರ್, 5,30,426 ವಾಣಿಜ್ಯ ಸಿಲಿಂಡರ್ ಮತ್ತು 1,17,522 ಆಟೋ ಎಲ್‌ಪಿಜಿ ಸಿಲಿಂಡರ್ ವಿತರಣೆಯಾಗಿವೆ. ಆಟೋ ಎಲ್ಪಿಜಿ ಸರಬರಾಜು ಸರಾಸರಿ ಶೇ.98 ಮಟ್ಟದಲ್ಲಿ ಸ್ಥಿರವಾಗಿದೆ. ಪ್ರತಿನಿತ್ಯ 44,700 ವಾಣಿಜ್ಯ ಸಿಲಿಂಡರ್‌ಗಳ ಬೇಡಿಕೆಯಿದ್ದು, ಲಭ್ಯತೆ ಆಧಾರದ ಮೇಲೆ ಹಂತ ಹಂತವಾಗಿ ಪೂರೈಕೆ ಮಾಡಲಾಗುತ್ತಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು. ಕಾಳಸಂತೆಯಲ್ಲಿ ಅಧಿಕ ದರಕ್ಕೆ ಮಾರಾಟ ಮಾಡಲಾಗುತ್ತಿದ್ದ 1,694 ಗ್ಯಾಸ್ ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ. ರಾಜ್ಯಾದ್ಯಂತ 1,429 ದಾಳಿ ನಡೆಸಲಾಗಿದ್ದು, 29 ಎ್ಎಆರ್ ದಾಖಲಿಸಿ 22 ಮಂದಿಯನ್ನು ಬಂಧಿಸಲಾಗಿದೆ. ಗೃಹ ಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಬಳಸುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
* ರಾಜ್ಯದಲ್ಲಿ ಪ್ರತಿನಿತ್ಯ 29,463 ವಾಣಿಜ್ಯ ಸಿಲಿಂಡರ್ ವಿತರಣೆ
* ತೈಲ ಕಂಪನಿಗಳಾದ ಐಒಸಿ, ಬಿಪಿಸಿಎಲ್, ಎಚ್‌ಪಿಸಿಎಲ್‌ಗಳಿಂದ ನಿತ್ಯ 98.8 ಮೆಟ್ರಿಕ್ ಟನ್ ಆಟೋ ಎಲ್ಪಿಜಿ ಸರಬರಾಜು
* ಆಟೋ ಎಲ್‌ಪಿಜಿ ಹಂಚಿಕೆ ಹೆಚ್ಚಿಸಲು ಕ್ರಮ
* ಆಟೋ ಎಲ್‌ಪಿಜಿ ದರ ಕಡಿತ ಕಡಿತಕ್ಕೆ ಕೇಂದ್ರಕ್ಕೆ ಪತ್ರ
* ವಲಸೆ ಕಾರ್ಮಿಕರಿಗೆ, ಬಡವರಿಗೆ 5 ಕೆ.ಜಿ. ತೂಕದ 4,048 ಸಿಲಿಂಡರ್ ಪೂರೈಕೆ
* 5.5 ಲಕ್ಷಕ್ಕೂ ಅಧಿಕ ಪಿಎನ್‌ಜಿ ಸಂಪರ್ಕ
* 485 ಸಿಎನ್‌ಜಿ ಕೇಂದ್ರಗಳ ಕಾರ್ಯನಿರ್ವಹಣೆ
* 18 ಪ್ರದೇಶಗಳಲ್ಲಿ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (ಸಿಜಿಡಿ) ಕಾಮಗಾರಿ ಪ್ರಗತಿ