Influenza virus in children
- * ಎಚ್1ಎನ್1 ಪ್ರಕರಣಗಳೂ ವರದಿ
- * ಆತಂಕ ಬೇಡ ಎಂದು ಮಕ್ಕಳ ರೋಗತಜ್ಞರು
ರಾಜಧಾನಿಯಲ್ಲಿ ವಿಶೇಷವಾಗಿ ಶಾಲಾಮಕ್ಕಳಲ್ಲಿ ಇನ್‌ಫ್ಲುಯೆಂಜಾ ಮಾದರಿಯ ಅನಾರೋಗ್ಯ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಈ ಸೋಂಕು ಬಾಧಿತರಲ್ಲಿ ಕೆಲವರಲ್ಲಿ ಎಚ್1ಎನ್1 ಇರುವುದು ವರದಿಯಾಗಿದೆ.
ಹಾಗೆಂದು ಜ್ವರ, ಕೆಮ್ಮು ಅಥವಾ ಶೀತ ಇರುವ ಪ್ರತಿಯೊಂದು ಮಗುವನ್ನು ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ. ಹಾಗಾಗಿ ತೀವ್ರ ಅಥವಾ ದೀರ್ಘಕಾಲದ ರೋಗಲಕ್ಷಣಗಳನ್ನು ಹೊಂದಿರುವವರಿಗೆ ಮಾತ್ರ ಎಚ್1ಎನ್1 ಪರೀಕ್ಷೆ ನಡೆಸಲಾಗುತ್ತಿದೆ ಎನ್ನುತ್ತಾರೆ ಆಸ್ಪತ್ರೆ ವೈದ್ಯರು.
ಸರ್ಕಾರಿ ಸ್ವಾಮ್ಯದ ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆಗೆ ಕರೆತರಲಾಗುವ ಮಕ್ಕಳಲ್ಲಿ ಶೇ. 80 ಜ್ವರ, ಶೀತ, ಕೆಮ್ಮು, ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಹಾಗೂ ತೀವ್ರ ಮತ್ತು ನಿರಂತರ ಜ್ವರ ಹಾಗೂ ಚಿಹ್ನೆಗಳನ್ನು ಹೊಂದಿರುವ ಮಕ್ಕಳಿಗೆ ಪರೀಕ್ಷೆಗೆ ಸೂಚಿಸಲಾಗುತ್ತಿದೆ ಎಂದು ಆಸ್ಪತ್ರೆಯ ಮಕ್ಕಳ ತಜ್ಞರು ತಿಳಿಸಿದ್ದಾರೆ.
ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿನ ವೈದ್ಯರು ಹೇಳುವಂತೆ, ಸದ್ಯಕ್ಕೆ ಯಾವುದೇ ಆತಂಕ ಪಡುವ ಸ್ಥಿತಿ ಇಲ್ಲ. ಆದರೆ ವೈರಾಣು ಜ್ವರ ಹೊಂದಿರುವ ಮಕ್ಕಳು ಚಿಕಿತ್ಸೆ ಬರುವ ಸಂಖ್ಯೆ ಹೆಚ್ಚಾಗಿದೆ. ಸದ್ಯ ‘ಸಾರಿ’ ಪ್ರಕರಣಗಳನ್ನು ಮಾತ್ರ ಪರೀಕ್ಷಿಸಲಾಗುತ್ತಿದೆ. ಇದರಲ್ಲಿ ನಿತ್ಯ 2-3 ಎಚ್1ಎನ್1 ಪ್ರಕರಣಗಳು ದೃಢಪಡುತ್ತಿವೆ. ಆದರೆ ಇದು ಎಚ್1ಎನ್1 ಹೆಚ್ಚಳವನ್ನು ಸೂಚಿಸುವುದಿಲ್ಲ ಎಂದಿದ್ದಾರೆ.
ನಗರದಲ್ಲಿ ಹೊರರೋಗಿ ಮತ್ತು ತುರ್ತು ವಿಭಾಗಗಳಿಗೆ ಭೇಟಿ ನೀಡುವ ಮಕ್ಕಳಲ್ಲಿ ಎಚ್1ಎನ್1 ಮತ್ತು ಇನ್‌ಫ್ಲುಯೆಂಜಾ ತರಹದ ಅನಾರೋಗ್ಯ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಕರಣಗಳು ತುಂಬ ಹೆಚ್ಚಾಗಿದೆ ಎನ್ನುತ್ತಾರೆ ಮಕ್ಕಳ ತಜ್ಞರು.
ಶಾಲಾಮಕ್ಕಳಲ್ಲೇ ಅಧಿಕ
ಶಾಲೆಯ ಮಕ್ಕಳು ಹೆಚ್ಚಿನ ಸಂಖ್ಯೆಯ ವೈರಾಣು ಜ್ವರ ಹೆಚ್ಚುತ್ತಿದೆ. ತರಗತಿಯಲ್ಲಿ ಸಹಪಾಠಿಗಳ ದಟ್ಟಣೆ ಮತ್ತು ಗಾಳಿ- ಬೆಳಕಿನ ಅಸಮರ್ಪಕತೆ ರೋಗ ಹರಡುವಿಕೆಗೆ ಸಹಾಯ ಮಾಡುತ್ತದೆ. ಆರು ತಿಂಗಳಿಂದ 18 ವರ್ಷ ವಯಸ್ಸಿನ ಮಕ್ಕಳು, ವಿಶೇಷವಾಗಿ ಎರಡರಿಂದ ಐದು ವರ್ಷ ಮತ್ತು 10 ರಿಂದ 14 ವರ್ಷ ವಯಸ್ಸಿನವರು ಇದರಿಂದ ಹೆಚ್ಚು ಬಳಲುತ್ತಿದ್ದಾರೆ. ಜ್ವರ, ಆಯಾಸ, ಗಂಟಲು ನೋವು, ದೇಹದ ನೋವು ಮತ್ತು ಉಸಿರಾಟದ ತೊಂದರೆ, ವಾಂತಿ, ಅತಿಸಾರ ಮತ್ತು ಹೊಟ್ಟೆನೋವಿನಿಂದ ಸಂಕಟ ಅನುಭವಿಸುತ್ತಿದ್ದಾರೆ. ಈ ಬಾರಿ ಸಾಮಾನ್ಯ ಋತುಮಾನದ ಮಾದರಿ ಕಾಣಿಸಿಕೊಳ್ಳುವ ಮೊದಲು ಮುಂಗಾರು ಆರ್ದ್ರತೆ, ತಾಪಮಾನ ಬದಲಾವಣೆಗಳು ಮತ್ತು ತರಗತಿಯಲ್ಲಿ ನಿಕಟ ಸಂವಹನ ಪ್ರಸರಣಕ್ಕೆ ಕಾರಣ ಎನ್ನಲಾಗಿದೆ.
ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು
* ಜ್ವರ ಅಥವಾ ಜ್ವರದ ಲಕ್ಷಣಗಳಿರುವ ಮಕ್ಕಳನ್ನು ಜ್ವರಮುಕ್ತವಾಗುವವರೆಗೆ ಶಾಲೆಯಿಂದ ದೂರವಿಡಬೇಕು.
* ರೋಗಲಕ್ಷಣದ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಬೇಕು.
* ಶಾಲೆಯ ಕೊಠಡಿಗಳು ಮನೆಯ ಕೊಠಡಿಗಳಲ್ಲಿ ಸಾಕಷ್ಟು ಗಾಳಿ- ಬೆಳಕು ಬರುವಂತೆ ವ್ಯವಸ್ಥೆ ಮಾಡಬೇಕು.
* ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಾಗೂ ಹೆಚ್ಚಿನ ಅಪಾಯದ ಗುಂಪಿನ ಮಕ್ಕಳಿಗೆ ವಾರ್ಷಿಕ ಇನ್‌ಫ್ಲುಯೆಂಜಾ ಲಸಿಕೆ ಹಾಕಿಸಬೇಕು.
* ಜ್ವರ ಬಂದಾಗ ಸ್ವಯಂ ಔಷಧ ಪಡೆಯದೆ ವೈದ್ಯರಲ್ಲಿ ತೋರಿಸಬೇಕು.
* ತಾಜಾ ಮತ್ತು ಶುಚಿಯಾದ ಹಣ್ಣು- ತರಕಾರಿ, ಮನೆ ಆಹಾರ ಸೇವಿಸಬೇಕು.
* ಕಾಯಿಸಿ ಆರಿಸಿದ ನೀರನ್ನು ಕುಡಿಯಬೇಕು.
* ವೈಯಕ್ತಿಕ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು.