ಅಮೇಬಿಕ್ ಮೆನಿಂಗೊಎನ್ಸೆಫಲೈಟಿಸ್
- ಅಮೇಬಿಕ್ ಮೆನಿಂಗೊಎನ್ಸೆಫಲೈಟಿಸ್
- ಕೇರಳದಲ್ಲಿ ಮಿದುಳು ಸೋಂಕು ಹೆಚ್ಚಳ
- ಶಬರಿ ಮಲೆ ಯಾತ್ರಿಕರಿಗೆ ಎಚ್ಚರಿಕೆ ಕ್ರಮಗಳ ಕುರಿತು ಮಾರ್ಗಸೂಚಿ
ಬೆಂಗಳೂರು: ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾ ಹಾವಳಿ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆ ಕೈಗೊಳ್ಳುವ ಕರ್ನಾಟಕದ ಭಕ್ತರು ಎಚ್ಚರಿಕೆ ವಹಿಸುವಂತೆ ಸೂಚಿಸಿ ಆರೋಗ್ಯ ಇಲಾಖೆಯ ಮಂಗಳವಾರ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.
ಅಮೇಬಿಕ್ ಮೆನಿಂಗೊಎನ್ಸೆಫಲೈಟಿಸ್ (ನೇಗ್ನೇರಿಯಾ ಫೌಲೇರಿ)ಎಂಬ ಮಿದಿಳು ಸೋಂಕಿನಿಂದ ಕೇರಳದಲ್ಲಿ ಈಗಾಗಲೇ 19 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಕೇರಳ ಸರ್ಕಾರ ಶಬರಿಮಲೆ ಯಾತ್ರಿಕರಿಗೆ ಕಟ್ಟೆಚ್ಚರವಹಿಸುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ಹಾಗೂ
ಸೋಂಕು ಬಾರದಂತೆ ತಡೆಯಲು ಸುರಕ್ಷತಾ ನಿಯಮ ಪಾಲಿಸಬೇಕಿದೆ. ಈ ನಿಟ್ಟಿನಲ್ಲಿ ಇಲಾಖೆ ಸಲಹೆಗಳನ್ನು ನೀಡಿದೆ.
ಇಲಾಖೆ ಸಲಹೆಗಳು:
ಯಾತ್ರೆಯ ಸಮಯದಲ್ಲಿ ನಿಂತ ನೀರಿನಲ್ಲಿ ಸ್ನಾನ ಮಾಡುವಾಗ ನೀರು ಮೂಗಿಗೆ ಪ್ರವೇಶಿಸದಂತೆ ಮೂಗಿಗೆ ಕ್ಲಿಪ್‌ಗಳನ್ನು ಬಳಸಿ. ಅಥವಾ ಮೂಗನ್ನು ಬಿಗಿಯಾಗಿ ಮುಚ್ಚಿ ಹಿಡಿದು ಮುನ್ನೆಚ್ಚರಿಕೆ ವಹಿಸಿ. ಸೋಂಕು ಲಕ್ಷಣ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದು ಇಲಾಖೆ ತಿಳಿಸಿದೆ.
ರೋಗ ಲಕ್ಷಣಗಳು:
ನೀರಿನ ಸಂಪರ್ಕದ ಏಳು ದಿನಗಳ ಒಳಗೆ ಜ್ವರ, ತೀವ್ರ ತಲೆ ನೋವು, ವಾಕರಿಕೆ ಅಥವಾ ವಾಂತಿ, ಕುತ್ತಿಗೆ ಬಿಗಿತ, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ, ವ್ಯಕ್ತಿಯ ಅಸ್ವಸ್ಥತೆ ಲಕ್ಷಣ ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ತುರ್ತು ಚಿಕಿತ್ಸೆಗೆ ಹತ್ತಿರದ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತರು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.
ಸೋಂಕು ಹೇಗೆ ಹರಡುತ್ತದೆ?
ನೇಗ್ಲೇರಿಯಾ ಫೌಲೇರಿ ಎಂಬುದು ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ. ಇದು ಮುಖ್ಯವಾಗಿ ನಿಂತ ನೀರು, ಕೊಳೆ, ಕೆರೆಗಳಂತಹ ಬೆಚ್ಚಗಿನ ಸಿಹಿನೀರು ಹಾಗೂ ಮಣ್ಣಿನಲ್ಲಿ ಕಂಡು ಬರುತ್ತದೆ. ಈ ಸೋಂಕು ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಸ್ನಾನದ ಸಮಯದಲ್ಲಿ ಮೂಗಿನ ಮೂಲಕ ಮಿದುಳು ಪ್ರವೇಶಿಸುತ್ತದೆ. ನೆಗ್ಲೇರಿಯಾ ಫೌಲೆರಿ ಅತಂತ್ಯ ವಿಷಕಾರಿ ಸೂಕ್ಷ್ಮಜೀವಿ. ನೀರಿನಿಂದ ಮೂಗಿಗೆ ಪ್ರವೇಶಿಸಿದಾಗ ಅದು ಮೆದುಳನ್ನು ತಲುಪಿ ಅಮೇಬಿಕ್ ಮೆನಿಂಗೊಎನ್ಸೆಫಲೈಟಿಸ್ ಎನ್ನುವ ಅಪರೂಪದ ಮಾರಣಾಂತಿಕ ಮಿದುಳು ಸೋಂಕು ಉಂಟು ಮಾಡುತ್ತದೆ.