ಗುರು ಸದಾಶಿವ ಮುತ್ಯಾ  
ರಾಜ್ಯ

ದಾಸನಾಳದಲ್ಲಿ ಸದಾಶಿವರುದ್ರೇಶ್ವರ ಜಾತ್ರೋತ್ಸವ ಇಂದಿನಿಂದ

ಬಸಪ್ಪ ದಳವಾಯಿ ಮುಗಳಿಹಾಳ
ಸಮೀಪದ ದಾಸನಾಳ ಗ್ರಾಮದಲ್ಲಿ ಜ.6ರಿಂದ 10ರವರೆಗೆ ಬಬಲಾದಿಮಠದ ಶ್ರೀ ಸದಾಶಿವರುದ್ರೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಲಿದೆ.
ಜ.6ರಂದು ಲಿಂ.ಶಿವರುದ್ರೇಶ್ವರ ಮುತ್ಯಾ ಅವರ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಜ.7ರಂದು ಬೆಳಗ್ಗೆ 5 ಗಂಟೆಗೆ ಶ್ರೀ ಶಿವರುದ್ರೇಶ್ವರ 35ನೇ, ಮಾತೋಶ್ರೀ ಶಿವಮ್ಮ ತಾಯಿ ಅವರ 25ನೇ ಹಾಗೂ ಸಂಪತ್​ ದೇವರ 5ನೇ ಸ್ಮರಣೋತ್ಸವ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಧರ್ಮಚಿಂತನ ಗೋಷ್ಠಿ ಹಾಗೂ ತುಲಾಭಾರ ಕಾರ್ಯಕ್ರಮ ಜರುಗಲಿದೆ. ಸಂಜೆ 5 ಗಂಟೆಗೆ ಮಹಾರಥೋತ್ಸವ ನೆರವೇರಲಿದೆ. ರಾತ್ರಿ 9.30ಕ್ಕೆ ಸ್ಥಳಿಯ ಸದಾಶಿವ ನಾಟ್ಯಸಂ "ಉತ್ತಮರ ಮನೆತನ' ನಾಟಕ ಪ್ರದರ್ಶಿಸಲಿದೆ. ಜ.8ರಂದು ಬೆಳಗ್ಗೆ 8 ಗಂಟೆಗೆ ಪಂಥಿ ಸಾಗುವುದು. 10ಕ್ಕೆ ಜೋಡೆತ್ತಿನ ತೆರೆ ಬಂಡಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಜ.9ರಂದು ಜೋಡು ಕುದುರಿ ಚಕ್ಕಡಿ ಸ್ಪರ್ಧೆ ಹಾಗೂ ರಾತ್ರಿ ಸಂಗೀತ ಸಿಂಚನ ಕಾರ್ಯಕ್ರಮ ಜರುಗಲಿದೆ. ಜ.10ರಂದು ಬೆಳಗ್ಗೆ 10ಕ್ಕೆ ಜೋಡೆತ್ತಿನ ಎತ್ತಿನ ಕಲ್ಲು ಜಗ್ಗುವ ಶರ್ಯತ್ತು, ಸಂಜೆ ಟಗರಿನ ಕಾಳಗ ಸ್ಪರ್ಧೆ ಹಾಗೂ ಜ.11 ರಂದು ಕಲಶ ಇಳಿಸುವ ಕಾರ್ಯಕ್ರಮ ಜರುಗಲಿದೆ.
ಹಿನ್ನೆಲೆ: ಶಿವರುದೇಶ್ವರ ಮುತ್ಯಾರನ್ನು ಶ್ರೀ ಗುರು ಚಕ್ರವರ್ತಿ ಸದಾಶಿವ ಮುತ್ಯಾ ಮತ್ತು ದಾನಮ್ಮ ತಾಯಿ ಬೆಳೆಸಿದರು. ನೀನು ಇಲ್ಲಿ ಮಠದಲ್ಲಿರುವುದು ಬೇಡ ದೇಶ ಸಂಚಾರ ಮಾಡುತ್ತಾ ಅಲ್ಲೆಲ್ಲಿ ಮಠಗಳನ್ನು ಸ್ಥಾಪಿಸಿ ಭಕ್ತರನ್ನು ಉದ್ಧಾರ ಮಾಡೆಂದು ಆಶೀರ್ವದಿಸಿದರು. ಕ್ಷೇತ್ರ ಸಂಚಾರ ಹಾಗೂ ಹಲವಾರು ಪವಾಡ ಮಾಡುತ್ತಾ ಶಿವರುದ್ರೇಶ್ವರರು ಜಮಖಂಡಿ ತಾಲೂಕಿನ ಆಲಗೂರ, ರಾಮದುರ್ಗ ತಾಲೂಕಿನ ಬನ್ನೂರು, ಗೋಕಾಕ ತಾಲೂಕಿನ ಬಗರನಾಳಲ್ಲಿ ಬಬಲಾದಿ ಮಠ ಸ್ಥಾಪಿಸಿದರು. ಬಹುದಿನಗಳ ಬಳಿಕ 1991 ಜನವರಿ 6ರಂದು ದಾಸನಾಳದಲ್ಲಿ ಕಾಲವಾದರು. ಗ್ರಾಮದ ಹಿರಿಯರೆಲ್ಲ ಒಗ್ಗೂಡಿ ಗ್ರಾಮದಲ್ಲಿ ಮಠ ಸ್ಥಾಪಿಸಿದರು. ಅಂದಿನಿಂದ ಪ್ರತಿ ವರ್ಷ ಜ.6ರಿಂದ 10ರವರೆಗೆ ಅದ್ದೂರಿ ಜಾತ್ರೆ ನಡೆಯುತ್ತಿರುವುದು ವಿಶೇಷ.