Improving health through a good lifestyle
ಕುಣಿಗಲ್: ಯುವಜನರಲ್ಲಿ ಅತಿಯಾದ ಮೊಬೈಲ್ ಬಳಕೆಯು ವ್ಯಸನವಾಗಿ ಮಾರ್ಪಾಡಾಗುತ್ತಿದೆ. ಜಂಕ್ಪುಡ್ ತೊರೆದು, ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸಿ ತಮ್ಮ ಆರೋಗ್ಯ ವೃದ್ಧಿಸಿ ಎಂದು ಪ್ರಾಂಶುಪಾಲ ಪ್ರೊ.ರಾಮಾಂಜನಪ್ಪ ಸಲಹೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಯುವ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿ, ದೈಹಿಕ ಚಟುವಟಿಕೆ ನಮ್ಮನ್ನು ಶಕ್ತಿಯುತವನ್ನಾಗಿಸಿ ಅನೇಕ ಕಾಯಿಲೆಗಳಿಂದ ದೂರ ಮಾಡುತ್ತವೆ. ಕಾಯಿಲೆ ಬಂದಾಗ ಚಿಕಿತ್ಸೆ ಪಡೆಯುವ ಬದಲು ಕಾಯಿಲೆ ಬರದಂತೆ ಮುಂಜಾಗ್ರತೆ ವಹಿಸಬೇಕು ಎಂದರು.
ಅಕ್ಷಯ ನ್ಯೂಟ್ರಿಷಿಯನ್ ಕ್ಲಬ್ನ ರಾಜೇಶ್ ಮಾತನಾಡಿ, ಶೇ.35 ಜನರು ಸ್ಥೂಲಕಾಯ ಹೊಂದಿದ್ದು, ಶೇ.15ರಷ್ಟು ಜನರು ಅತಿಯಾದ ತೂಕ ಹೊಂದಿದುವ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಎತ್ತರಕ್ಕೆ ತಕ್ಕ ತೂಕವಿರಬೇಕು. ದೇಹ ರ್ನಿಜಲೀಕರಣವಾಗದಂತೆ ಅಗತ್ಯ ನೀರು ಕುಡಿಯಬೇಕು. ಅತಿಯಾದ ಮೊಬೈಲ್ ಸ್ಕ್ರೀನ್ ಟೈಮ್ ನಿದ್ದೆ ಬರದಂತೆ ಮಾಡಿ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಹಾಮೋರ್ನ್ ಉತ್ಪತ್ತಿ ವ್ಯತ್ಯಯವಾಗುತ್ತದೆ. ಆದುದರಿಂದ ಹದಿಹರೆಯದಲ್ಲಿ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದರು.
ತುಮಕೂರಿನ ಆರ್ಚಿಡ್ ಸಂಸ್ಥೆಯ ಮುತ್ತುರಾಯ ಮಾತನಾಡಿ, ಮದ್ಯಪಾನ, ಡ್ರಗ್ಸ್ ಮತ್ತಿತರ ಸಾಮಾಜಿಕ ಪಿಡುಗುಗಳಿಗೆ ಯುವಜನರು ಬಲಿಯಾಗುತ್ತಿದ್ದು, ಬಲಿಯಾದವರ ಭವಿಷ್ಯ ಮಸುಕಾಗುತ್ತಿದೆ. ವಿಶ್ವ ಆರೋಗ್ಯ ದಿನದಂದು ಉತ್ತಮ ಆರೋಗ್ಯ ಪಡೆಯಲು ಯುವಜನರು ಶಪಥ ಮಾಡಬೇಕು ಎಂದರು.
ಯುವ ರೆಡ್ ಕ್ರಾಸ್ ಸಂಚಾಲಕ ಶ್ರೀನಿವಾಸಪ್ರಭು ಮಾತನಾಡಿ, ಎಲ್ಲ ಸಂಪತ್ತಿಗಿಂತಲೂ ಆರೋಗ್ಯ ಸಂಪತ್ತು ಶ್ರೇಷ್ಠ. ಆರೋಗ್ಯದ ಮಹತ್ವವನ್ನು ಎಲ್ಲರೂ ಅರಿಯಬೇಕು. ಸಮತೋಲಿತ, ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿ ಸಾಧ್ಯ ಎಂದರು.