ಕಲಬುರಗಿ ಜಿಪಂನಲ್ಲಿ ಇತ್ತೀಚೆಗೆ ಅನಧಿಕೃತವಾಗಿ ವರ್ಗಾವಣೆ ಕೌನ್ಸೆಲಿಂಗ್ ನಡೆದಿದ್ದಿ, ಅದನ್ನು ಸರಿಪಡಿಸುವಂತೆ ಒತ್ತಾಯಿಸಿ ಜಿಪಂ ಸಿಇಒ ರಾಹುಲ್ ಸಂಕನೂರ ಅವರಿಗೆ ಚಿಂಚೋಳಿಯಲ್ಲಿ ಸರ್ಕಾರಿ ನೌಕರರ ಸಂದಿಂದ ಮನವಿ ಸಲ್ಲಿಸಲಾಯಿತು. ದೇವಿಂದ್ರಪ್ಪ ಹೊಳ್ಕರ್, ಮಲ್ಲಿಕಾರ್ಜುನ ಪಾಲಾಮೂರ, ಜಗನ್ನಾಥರೆಡ್ಡಿ ಚಟ್ನಳ್ಳಿ ಇದ್ದರು.
- ಜಿಪಂ ಸಿಇಒ ರಾಹುಲ್ ಸಂಕನೂರ ಸೂಚನೆ
- ಚಿಂಚೋಳಿಯಲ್ಲಿ ಪ್ರಗತಿ ಪರಿಶೀಲನೆ ಸಭೆ
ಚಿಂಚೋಳಿ : ವಿಬಿ-ಜಿ ರಾಮ್-ಜಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಕ್ಷಣ ಕೂಲಿ ಕೆಲಸ ನೀಡುವ ಮೂಲಕ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಸಂಕನೂರ ಸೂಚನೆ ನೀಡಿದರು.
ಚಂದಾಪುರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಪ್ರಧಾನಮಂತ್ರಿ ವಸತಿ ಯೋಜನೆ ಸೇರಿ ವಿವಿಧ ವಸತಿ ಯೋಜನೆಯಲ್ಲಿ ಅರ್ಹ ಫಲಾನುಭವಿಗಳ ಲಿಸ್ಟ್ ಸಿದ್ಧಪಡಿಸಬೇಕು. ಕರ ವಸೂಲಿ ಪ್ರಗತಿಗೆ ಎಲ್ಲ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಶ್ರಮಿಸಬೇಕು. ಗ್ರಾಮ ಪಂಚಾಯಿತಿಗಳಿಗೆ ನೀಡಿದ ಗುರಿ ತಲುಪಬೇಕು. ತಾಲೂಕಿನಲ್ಲಿ ಕುಡಿವ ನೀರು, ಸ್ವಚ್ಛತೆ, ವಿದ್ಯುತ್ ದೀಪ ಸೇರಿ ಮೂಲ ಸೌಕರ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು. ಸಾರ್ವಜನಿಕರಿಂದ ದೂರುಗಳು ಬರದಂತೆ ಜಾಗೃತಿ ವಹಿಸಬೇಕು ಎಂದು ತಾಕೀತು ಮಾಡಿದರು.
ಸುಲೇಪೇಟ, ದಸ್ತಾಪುರ, ಚಂದ್ರಂಪಳ್ಳಿ, ಪೋಲಕಪಳ್ಳಿ ಸೇರಿ ವಿವಿಧೆಡೆ ಭೇಟಿ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ತಾಪಂ ಇಒ ಸಂತೋಷಕುಮಾರ ಚವ್ಹಾಣ್, ಪ್ರಮುಖರಾದ ನಾಗೇಂದ್ರಪ್ಪ, ಗೋವಿಂದರೆಡ್ಡಿ, ಜಗನ್ನಾಥರೆಡ್ಡಿ ಚಟ್ನಳ್ಳಿ, ಭೀಮಾಶಂಕರ ಕಮಕನೂರ, ಹೀರಾಸಿಂಗ್, ರಮೇಶ ತುಮಕುಂಟಾ, ವಿಜಯಲ್ಮ ಕನಕಪುರ, ರಾಜಶೇಖರ ಹಿತ್ತಲ್, ಮಡಿವಾಳಯ್ಯ ಸ್ವಾಮಿ, ಮಲ್ಲಿಕಾರ್ಜುನ, ಬಸವರಾಜ ಛಲವಾದಿ, ಪಾಂಡುರಂಗ ಇತರರಿದ್ದರು.