Karnataka Weather Forecast 
ರಾಜ್ಯ

ಕರ್ನಾಟಕದಲ್ಲಿ ಮೂರು ದಿನ ಮಳೆಯಾಗುವ ಮುನ್ಸೂಚನೆ; ಈ ಜೆಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ..Karnataka Rain

  • ಕರ್ನಾಟಕದಲ್ಲಿ ಮೂರು ದಿನ ಮಳೆಯಾಗುವ ಮುನ್ಸೂಚನೆ.

  • ದಕ್ಷಿಣ, ಉತ್ತರ ಒಳನಾಡು, ಮಲೆನಾಡಿನಲ್ಲಿ ಭಾರಿ ಮಳೆಯಾಗುವ ಸೂಚನೆ.

  • ಉತ್ತರ, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ.

Karnataka Rain Alert: ನೆರೆರಾಜ್ಯಗಳಲ್ಲಿ ಉಂಟಾಗಿರುವ ಚಂಡಮಾರುತದ ಪ್ರಭಾವದಿಂದಾಗಿ, ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ. ಕರಾವಳಿ ಪ್ರದೇಶದಲ್ಲಿ ಮಂಗಳವಾರದಿಂದ ವರುಣನ ಅಬ್ಬರಿಸಿದ್ದಾನೆ. ಬಿಸಿಲ ಕಾವಿನಲ್ಲಿ ಬೆಂದಿದ್ದ ಜನರು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಎರಡು ದಿನದಿಂದ ಇದ್ದ ಬಿಸಿಲು ಮಾಯವಾಗಿದ್ದು ಮೋಡ ಕವಿದ ವಾತಾವರಣದಿಂದಾಗಿ ಸಿಲಿಕಾನ್​ ಸಿಟಿ ಜನರು ಚಳಿ ಎದುರಿಸುತ್ತಿದ್ದಾರೆ.

ಎಲ್ಲೋ ಅಲರ್ಟ್

ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಇಂದು ಸೆ.24, ನಾಳೆ ಸೆ. 25 ಹಾಗೂ ಸೆ.26ರಂದು ಭಾರಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ, ಮಲೆನಾಡು ಪ್ರದೇಶದಲ್ಲಿ ವರುಣ ಅಬ್ಬರಿಸಲಿದ್ದು, ಎಲ್ಲೋ ಅಲರ್ಟ್​ ನೀಡಲಾಗಿದೆ. ಈ ಪ್ರದೇಶಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಎಲ್ಲೆಲ್ಲಿ ಮಳೆಯಾಗಲಿದೆ?

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ವಿಜಯಪುರ, ಕಲಬುರ್ಗಿ, ಯಾದಗಿರಿ, ರಾಯಚೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕರಾವಳಿ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗುವ ಕಾರಣ ಮೀನುಗಾರರು ಕೆಲವು ಕಾಲ ಸಮುದ್ರದತ್ತ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರಿನ ಕತೆ ಏನು?

ಬೆಂಗಳೂರಿನಲ್ಲಿ ಕಳೆದೆರಡು ದಿನ ಮಳೆ ಇರಲಿಲ್ಲ. ಬಿಸಿಲ ವಾತಾವರಣ ಇತ್ತು. ಇಂದು ಸೆ.24ರಂದು ಮೋಡ ಕವಿದ ವಾತಾವರಣ, ಆಗಾಗ್ಗೆ ಕೊಂಚ ಬಿಸಿಲು ಕಾಣಿಸಿಕೊಳ್ಳುತ್ತಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಆಂಧ್ರ-ಒಡಿಶಾ ರಾಜ್ಯಕ್ಕೆ ರೆಡ್ ಅಲರ್ಟ್

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂದ್ರ ಪ್ರದೇಶ ಮತ್ತು ಒಡಿಶಾದಲ್ಲಿ ಭಾರಿ ಮಳೆಯಾಗುತ್ತಿದೆ. ಉತ್ತರ ಆಂಧ್ರಪ್ರದೇಶದಲ್ಲಿ ವಾಯುಭಾರ ಕುಸಿತವುಂಟಾಗಿದ್ದು, ಗಾಳಿಯು ಗಂಟೆಗೆ 75 ಕಿಮೀ ವೇಗದಲ್ಲಿ ಬೀಸುತ್ತಿದೆ. ಇನ್ನೂ ಒಡಿಶಾದ ಕೊರಾಪುಟ್​, ಮಲ್ಕನ್​ಗಿರಿ, ಕಲಾಹಂಡಿ ಮತ್ತು ನಬರಂಗ್​​​​ ಸೇರಿದಂತೆ ಹಲವು ಜಿಲ್ಲೆಗೆ ರೆಡ್​ ಅಲರ್ಟ್​ ಘೋಷಿಸಲಾಗಿದೆ.

ಆಂಧ್ರ ಸಿಎಂ ಆದ ಚಂದ್ರ ಬಾಬು ನಾಯ್ಡು ಮತ್ತು ಒಡಿಶಾ ಸಿಡಂ ಮೋಹನ್​ ಚರಣ್​ ಮಾಝಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಪ್ರವಾಹ ಸಂಭವಿಸುವ ಪ್ರದೇಶದಲ್ಲಿರುವ ಕುಟುಂಬಸ್ಥರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲು ಸೂಚನೆ ನೀಡಲಾಗಿದೆ. ಮಳೆಯ ಅಪಾಯದಿಂದಾಗಿ ಜಾಗರೂಕರಾಗಿರುವಂತೆ ಆಯಾ ರಾಜ್ಯದ ಸಿಎಂಗಳು ಜನರಿಗೆ ಮನವಿ ಮಾಡಿಕೊಂಡಿದ್ದಾರೆ, (ಏಜೆನ್ಸೀಸ್)