- ಆ.14ರಿಂದ 19ರ ವರೆಗೆ ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ
- ಉತ್ತರ ಹಾಗೂ ದಕ್ಷಿಣ ಭಾರತದ ಯಾವೆಲ್ಲ ರಾಜ್ಯಗಳಲ್ಲಿ ವರುಣನ ಆಗಮನ?
- ಹೀಗಿದೆ ಗಮನಿಸಿ ಭಾರತೀಯ ಹವಾಮಾನ ಇಲಾಖೆಯ ವರದಿ
ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಕರ್ನಾಟಕ ಸೇರಿ ಹಲವು ರಾಜ್ಯಗಳ ಕೆಲವೆಡೆ ಮಾತ್ರ ಬಿರುಸಿನ ಮಳೆಯಾಗುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಇದರ ಬೆನ್ನಲ್ಲೇ ಆಗಸ್ಟ್ 13ರಿಂದ 19ರವರೆಗೆ ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತದ ಹಲವು ರಾಜ್ಯಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಪ್ರಮಾಣದಲ್ಲಿ ವರುಣನ ಆಗಮನವಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿದೆ.
ವಾಯುವ್ಯ ಭಾರತ (ವ್ಯಾಪಕ ಮಳೆ)
ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಉತ್ತರಾಖಂಡ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಪೂರ್ವ ಉತ್ತರ ಪ್ರದೇಶ ಮತ್ತು ಪೂರ್ವ ರಾಜಸ್ಥಾನದಲ್ಲೂ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಭಾರಿ ಮಳೆ
ಹಿಮಾಚಲ ಪ್ರದೇಶ, ಉತ್ತರಾಖಂಡದ ಕೆಲವು ಭಾಗಗಳಲ್ಲಿ ಜೋರು ಮಳೆ ಸುರಿಯಲಿದ್ದು, ಹರಿಯಾಣ, ಚಂಡೀಗಢ, ಛತ್ತೀಸ್‌ಗಢದಲ್ಲಿ ನಿರೀಕ್ಷೆಗೂ ಮೀರಿದ ಮಳೆಯಾಗುವ ಮುನ್ಸೂಚನೆಯ ಹಿನ್ನಲೆ ರೆಡ್ ಹಾಗೂ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಗಂಗಾ ನದಿ ತೀರದ ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಸಿಕ್ಕಿಂನಲ್ಲಿ ಬಿರುಸಿನ ಗಾಳಿ, ಮಳೆ ಸುರಿಯಲಿದೆ.
ದಕ್ಷಿಣ ಭಾರತ
ಕರಾವಳಿ ಕರ್ನಾಟಕ, ಕೇರಳ ಮತ್ತು ಮಾಹೆಯಲ್ಲಿ ನಾಳೆ (ಆ.14) ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ಕೇರಳದ ಕೆಲವೆಡೆ ಭಾರಿ ಮಳೆಯಾಗಲಿದ್ದು, ಆಂಧ್ರ ಪ್ರದೇಶ, ರಾಯಲಸೀಮಾ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ಒಳಭಾಗದಲ್ಲಿ ಚದುರಿದ ತುಂತುರು ಮಳೆ ಸಾಧ್ಯತೆಯಿದೆ. ಇನ್ನು, ಕೇರಳದ ಪತ್ತನಂತಿಟ್ಟ, ಕೊಟ್ಟಾಯಂ ಮತ್ತು ಇಡುಕ್ಕಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಈ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.
ಗಂಟೆಗೆ 60 ಕಿ.ಮೀ ವೇಗದಲ್ಲಿ ಗಾಳಿ
ಅಂಡಮಾನ್ ಅಂಡ್ ನಿಕೋಬಾರ್ ದ್ವೀಪಗಳಲ್ಲಿ ಆಗಸ್ಟ್ 14ರಿಂದ 19ರ ವರೆಗೆ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಒಡಿಶಾದಲ್ಲೂ ಬಲವಾದ ಗಾಳಿ ಸಹಿತ ಗುಡುಗು-ಮಿಂಚಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ,(ಏಜೆನ್ಸೀಸ್).