Imagine a permanent solution to the railway underpass problem 
ರಾಜ್ಯ

ರೈಲ್ವೆ ಅಂಡರ್​ಪಾಸ್​ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ

ಕೋಲಾರ ಡೆಸ್ಕ್
ಬಂಗಾರಪೇಟೆ: ಗಂಗಮ್ಮನಪಾಳ್ಯ, ಖಾದರ್​ ಲೇಔಟ್​ ನಿವಾಸಿಗಳು ರೈಲ್ವೆ ಅಂಡರ್​ಪಾಸ್​ ಸಮಸ್ಯೆಯಿಂದ ನಿತ್ಯ ಸಂಕಷ್ಟ ಅನುಭವಿಸುತ್ತಿದ್ದು, ಸಾರ್ವಜನಿಕರ ಸುರಕ್ಷತೆ, ಅನುಕೂಲಕ್ಕಾಗಿ ಶ್ರೀ ರೈಲ್ವೆ ಮೇಲ್ಸೇತುವೆ ನಿರ್ಮಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಕರ್ನಾಟಕ ದಲಿತ ರೈತ ಸೇನೆ ಅಧ್ಯಕ್ಷ ಹುಣಸಿನಹಳ್ಳಿ ವೆಂಕಟೇಶ್​ ಒತ್ತಾಯಿಸಿದರು.
ಬಂಗಾರಪೇಟೆ ರೈಲ್ವೆ ನಿಲ್ದಾಣದ ಮುಂಭಾಗ ಕರ್ನಾಟಕ ದಲಿತ ರೈತ ಸೇನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ನಗರಸಭೆ ವ್ಯಾಪ್ತಿಯ ಗಂಗಮ್ಮನಪಾಳ್ಯ, ಖಾದರ್​ ಲೇಔಟ್​ ಪ್ರದೇಶಗಳಲ್ಲಿ ದಲಿತರು, ಅಲ್ಪಸಂಖ್ಯಾತರು, ಬಡ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಬಂಗಾರಪೇಟೆ&ಕೋಲಾರ ರೈಲು ಮಾರ್ಗದಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂದರು.
ಹಿಂದೆ ಇದೇ ಸ್ಥಳದಲ್ಲಿ ರೈಲ್ವೆ ಗೇಟ್​ ಇದ್ದು, ಅಂಡರ್​ಪಾಸ್​ ನಿಮಾರ್ಣದ ನಂತರ ಅದನ್ನು ತೆರವುಗೊಳಿಸಲಾಗಿದೆ. ಆದರೆ ಮಳೆಗಾಲದಲ್ಲಿ ಅಂಡರ್​ಪಾಸ್​ನಲ್ಲಿ ನೀರು ತುಂಬಿಕೊಳ್ಳುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ವೃದ್ಧರು, ಶಾಲಾ ವಾಹನಗಳು ಸಂಚರಿಸಲು ತೀವ್ರ ತೊಂದರೆ ಉಂಟಾಗುತ್ತಿದೆ ಎಂದರು.
ಅಂಡರ್​ಪಾಸ್​ನಲ್ಲಿ ಸಮರ್ಪಕ ವಿದ್ಯುತ್​ ದೀಪಗಳ ವ್ಯವಸ್ಥೆ ಇಲ್ಲದ ಕಾರಣ ರಾತ್ರಿ ಕತ್ತಲು ಆವರಿಸುತ್ತಿದ್ದು, ಮಹಿಳೆಯರು, ವಿದ್ಯಾರ್ಥಿನಿಯರು ಭಯದಿಂದ ಓಡಾಡುವ ಪರಿಸ್ಥಿತಿ ನಿಮಾರ್ಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈಲ್ವೆ ಇಲಾಖೆ ಸಾರ್ವಜನಿಕರ ಹಿತದೃಷ್ಟಿಯಿಂದ ಅಂಡರ್​ಪಾಸ್​ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಮೇಲ್ಸೇತುವೆ ನಿರ್ಮಿಸಬೇಕು. ಅದು ಸಾಧ್ಯವಾಗದಿದ್ದರೆ ಹಿಂದಿನಂತೆ ರೈಲ್ವೆ ಗೇಟ್​ ಅಳವಡಿಸಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕರೊಂದಿಗೆ ಹೋರಾಟದ ಎಚ್ಚರಿಕೆ ನೀಡಿದರು.
ದಲಿತ ರೈತ ಸೇನೆ ಪದಾಧಿಕಾರಿಗಳಾದ ರೆಡ್ಡಿಹಳ್ಳಿ ಸುರೇಶ್​, ವೇಣುಗೋಪಾಲ್​, ರಾಜುಕೋಟೆ, ಕಾರಮಾನಹಳ್ಳಿ ಅಶೋಕ್​, ಕೊಂಡೇನಹಳ್ಳಿ ರವಿಕುಮಾರ್​, ಯಲವಹಳ್ಳಿ ತಿಮ್ಮರಾಜು, ಗಂಗಮ್ಮನಪಾಳ್ಯ ದಿನಕರ್​ ಇದ್ದರು.