Indian Medical Association
- * ರಾಜಸ್ಥಾನದಲ್ಲಿ ವೈದ್ಯರ ಮೇಲಿನ ಹಲ್ಲೆಗೆ ಖಂಡನೆ
ಬೆಂಗಳೂರು: ರಾಜಸ್ಥಾನದಲ್ಲಿ ಡಾ.ಆನಂದ್ ಗುಪ್ತ ಅವರ ಮೇಲಿನ ದಾಳಿಯನ್ನು ಖಂಡಿಸಿರುವ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆ, ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸಲು ಕಾನೂನು ಬಲಪಡಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.
ಡಾ. ಗುಪ್ತ ಐಎಂಎ ರಾಜಸ್ಥಾನ ಘಟಕದ ರಾಜ್ಯಾಧ್ಯಕ್ಷರಾಗಿದ್ದು, ತಮ್ಮ ಸಹೋದ್ಯೋಗಿ ಜೆ.ಪಿ. ಶರ್ಮ ಅವರನ್ನು ರಕ್ಷಿಸಿಲು ಹೋದ ಸಂದರ್ಭದಲ್ಲಿ ಅವರ ಮೇಲೆ ದಾಳಿ ನಡೆದಿತ್ತು. ಇದು ಇಡೀ ಆರೋಗ್ಯ ವ್ಯವಸ್ಥೆಯ ಮೇಲಿನ ದಾಳಿಯಾಗಿದೆ. ವೈದ್ಯರ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದ್ದು, ಆರೋಗ್ಯ ವೃತ್ತಿಪರರ ಮೇಲಿನ ನಿರಂತರ ದಾಳಿಗಳು ಭಯ ಮತ್ತು ಅಭದ್ರತೆಯ ವಾತಾವರಣ ಸೃಷ್ಟಿಸುತ್ತದೆ ಎಂದು ಐಎಂಎ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ.ಟಿ.ಎ. ವೀರಭದ್ರಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು, ನಾಗರಿಕ ಸಮಾಜ ಸಂಸ್ಥೆಗಳು, ವೃತ್ತಿಪರ ಸಂಸ್ಥೆಗಳು ಮತ್ತು ಎಲ್ಲಾ ಜವಾಬ್ದಾರಿಯುತ ನಾಗರಿಕರು ಇಂತಹ ಹಿಂಸಾಚಾರವನ್ನು ಖಂಡಿಸಬೇಕು. ವೈದ್ಯರು ಮತ್ತು ಆರೋಗ್ಯ ಸಂಸ್ಥೆಗಳನ್ನು ರಕ್ಷಿಸಲು ಕಠಿಣ ಕಾನೂನನ್ನು ಜಾರಿಗೆ ತರಬೇಕು. ಅಪರಾಧಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.