ಶಹಾಬಾದ್ ಸಮುದಾಯ ಆರೋಗ್ಯ ಕೇಂದ್ರದಿಂದ ಅನಧಿಕೃತವಾಗಿ ಸಾಮಗ್ರಿಗಳನ್ನು ಸಾಗಿಸುತ್ತಿರುವುದು.
- ಶಹಾಬಾದ್ ಸಿಎಚ್ಸಿಯಲ್ಲಿ ಘಟನೆ
- ಸಾರ್ವಜನಿಕರಿಂದ ವಾಹನ ತಡೆ
ಶಹಾಬಾದ್: ಸಮುದಾಯ ಆರೋಗ್ಯ ಕೇಂದ್ರ(ಸಿಎಚ್ಸಿ)ದಿಂದ ಆಸ್ಪತ್ರೆ ಸಾಮಗ್ರಿಗಳನ್ನು ಅಧಿಕೃತ ಆದೇಶವಿಲ್ಲದೆ ಬೊಲೆರೋ ಪಿಕಪ್ ವಾಹನದಲ್ಲಿ ಸಾಗಿಸಲು ಯತ್ನಿಸಿದ ಟನೆ ಮಂಗಳವಾರ ಸಂಜೆ ನಡೆದಿದೆ.
ಕೆಎ&32 ಎಬಿ&6300 ನೋಂದಣಿ ಸಂಖ್ಯೆಯ ಬೊಲೆರೋ ಪಿಕಪ್ ವಾಹನದಲ್ಲಿ ಮೂರು ಹೊಸ ಕಾಟ್, ಮೂರು ಬೆಡ್, ಒಂದು ಹೊಸ ಹೆರಿಗೆ ಟೇಬಲ್, ಒಂದು ಬೆಡ್ ಮತ್ತು ಮೂರು ರ್ಯಾಕ್ಗಳನ್ನು ಸಾಗಿಸಲು ಯತ್ನಿಸಲಾಗುತ್ತಿತ್ತು. ಈ ವೇಳೆ ಸ್ಥಳಿಯ ಮುಖಂಡರು ಹಾಗೂ ಸಾರ್ವಜನಿಕರು ತಡೆದು ಪರಿಶೀಲಿಸಿದ್ದಾರೆ.
ಆಸ್ಪತ್ರೆಯ ಆರೋಗ್ಯ ನಿರೀಣಾಧಿಕಾರಿ ಯೂಸೂಫ್ ನಾಕೇದಾರ ನೇತೃತ್ವದಲ್ಲಿ ಸಾಮಗ್ರಿಗಳನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು, ವಾಹನ ಚಾಲಕನನ್ನು ಸಾರ್ವಜನಿಕರು ಪ್ರಶ್ನಿಸಿದಾಗ ಮೊದಲಿಗೆ ಸಾಮಗ್ರಿಗಳನ್ನು ಸ್ಥಳಿಯವಾಗಿಯೇ ಸಾಗಿಸಲಾಗುತ್ತಿದೆ ಎಂದು ಹೇಳಿದ್ದು, ಬಳಿಕ ರಾವೂರ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದಾನೆ. ಇದರಿಂದ ಅನುಮಾನಗೊಂಡ ಸ್ಥಳಿಯ ಮುಖಂಡರು ರಾವೂರ ಆರೋಗ್ಯ ಕೇಂದ್ರದ ವೈದ್ಯರನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ಆದರೆ ಅವರು ಕೇಂದ್ರಕ್ಕೆ ಅಗತ್ಯವಿರುವ ಸಾಮಗ್ರಿ ಜಿಲ್ಲಾ ವೈದ್ಯಾಧಿಕಾರಿಗಳ ಮೂಲಕವೇ ತರಿಸಿಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ತಾಲೂಕು ಆರೋಗ್ಯಾಧಿಕಾರಿ ಡಾ.ಇರ್ಫಾನ್ ಇನಾಮದಾರ್ ಅವರನ್ನು ಸಂಪರ್ಕಿಸಿದಾಗ, ತಾವು ಯಾವುದೇ ಆಸ್ಪತ್ರೆ ಸಾಮಗ್ರಿ ಸಾಗಿಸಲು ಆದೇಶ ನೀಡಿಲ್ಲ ಎಂದು ಹೇಳಿದರು. ಹೀಗಾಗಿ ಸಾರ್ವಜನಿಕರು ಕೂಡಲೇ ಶಹಾಬಾದ್ ನಗರ ಠಾಣೆಗೆ ಮಾಹಿತಿ ನೀಡಿದ್ದು, ವೈದ್ಯಕಿಯ ಸಾಮಗ್ರಿಗಳಿದ್ದ ವಾಹನವನ್ನು ಠಾಣೆಗೆ ಕರೆದೊಯ್ದರು.
ಬಳಿಕ ಡಾ.ಇರ್ಫಾನ್ ಇನಾಮದಾರ್, ಆಡಳಿತಾಧಿಕಾರಿ ಡಾ.ಸಂತೋಷ ಪಾಟೀಲ್ ಠಾಣೆಗೆ ಆಗಮಿಸಿ ತಮ್ಮ ಗಮನಕ್ಕೆ ಬಾರದೆ ಆಸ್ಪತ್ರೆ ಸಾಮಗ್ರಿಗಳನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿಸಿದರು. ನಂತರ ಆರೋಗ್ಯ ನಿರೀಕ್ಷಣಾಧಿಕಾರಿ ಯೂಸೂಫ್ ನಾಕೇದಾರ ವಿರುದ್ಧ ದೂರು ದಾಖಲಿಸಿದರು.
ಸಿಪಿಐ ಪರಶುರಾಮ ವನಂಜಕರ್, ಪಿಎಸ್ಐ ಚಂದ್ರಕಾಂತ ಮೆಕಾಲೆ ಪ್ರತಿಕ್ರಿಯಿಸಿ, ಸರ್ಕಾರಿ ಸ್ವತ್ತನ್ನು ಯಾವುದೇ ಅನುಮತಿ ಇಲ್ಲದೆ ಸಾಗಿಸುವುದು ಅಪರಾಧ. ಟಿಎಚ್ಒ ದೂರು ಆಧರಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು. ತಪ್ಪಿತಸ್ಥರು ಕಂಡುಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ದಲಿತ ಸೇನೆಯ ಭೀಮಾಶಂಕರ ಕಾಂಬಳೆ, ದಲಿತ ಪ್ಯಾಂಥರ್ನ ಮಲ್ಲಿಕಾರ್ಜುನ ಕಟ್ಟಿಮನಿ, ಶಿವಸೇನಾ ತಾಲೂಕು ಅಧ್ಯ ದಶರಥ ದೇಸಾಯಿ, ಜೆಡಿಎಸ್ ತಾಲೂಕು ಅಧ್ಯ ಅಬ್ದುಲ್ ಗನಿ ಸಾಬೀರ್, ಪ್ರಮುಖರಾದ ವಸಂತ ಕಾಂಬಳೆ, ಪುನೀತ್ ಹಳ್ಳಿ, ಸುರೇಶ ಮಾನ್ವಿಕರ್, ಸುನೀಲ ದೊಡ್ಡಮನಿ, ಮಲ್ಲಿಕಾರ್ಜುನ ಹಳ್ಳಿ, ದಿನೇಶ ಗೌಳಿ, ರಾಮು ಕುಸಾಳೆ, ಸಿದ್ರಾಮ ಕುಸಾಳೆ, ಶಿವಕುಮಾರ ತಳವಾರ, ಮಹಾದೇವ ಇತರರಿದ್ದರು.