ಮಾತು ಆಡಿದರೆ ಮುತ್ತು ಒಡೆಯುತ್ತೆ, ಎಚ್ಚರ! ಸಿಎಂ ಪದಗ್ರಹಣಕ್ಕೂ ಮುನ್ನ ಡಿಕೆಶಿಗೆ ನೊಣವಿನಕೆರೆ ಅಜ್ಜಯ್ಯ ಸೂಚನೆ
ಬೆಂಗಳೂರು: ಕರ್ನಾಟಕ ರಾಜಕೀಯ ಸಾಮ್ರಾಜ್ಯದ ಮುಂದಿನ ಮುಕುಟಮಣಿಯಾಗಿ ಡಿ.ಕೆ. ಶಿವಕುಮಾರ್ ಅವರ ಪಟ್ಟಾಭಿಷೇಕಕ್ಕೆ ಮುಹೂರ್ತ ನಿಗದಿಯಾಗುತ್ತಿರುವ ಬೆನ್ನಲ್ಲೇ, ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಪ್ರಸಿದ್ಧ ನೊಣವಿನಕೆರೆ ಶ್ರೀ ಕಾಡುಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳು (ನೊಣವಿನಕೆರೆ ಅಜ್ಜಯ್ಯ), ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯ ಚದುರಂಗದಾಟದ ಕೊನೆಯ ಹಂತದಲ್ಲಿ ಸಂಪೂರ್ಣ ಮೌನವ್ರತ ಕಾಯ್ದುಕೊಳ್ಳುವಂತೆ ಆಜ್ಞಾಪಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ಈಗಾಗಲೇ ಲೋಕಭವನದಲ್ಲಿ ತಮ್ಮ ಅಧಿಕೃತ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ರಾಜ್ಯಪಾಲರು ರಾಜಧಾನಿಗೆ ಆಗಮಿಸಿದ ತಕ್ಷಣ ಅದು ಅಂಗೀಕಾರಗೊಳ್ಳಲಿದೆ. ಸ್ವತಃ ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಘೋಷಿಸಿದ್ದರೂ, ಅಧಿಕಾರದ ಗದ್ದುಗೆ ಏರುವ ಕೊನೆಯ ಕ್ಷಣದವರೆಗೂ ಅತ್ಯಂತ ಜಾಗರೂಕರಾಗಿರಲು ಡಿಕೆಶಿಗೆ ಆಧ್ಯಾತ್ಮಿಕ ವಲಯದಿಂದ ಕಠಿಣ ಸಂದೇಶ ರವಾನೆಯಾಗಿದೆ.
ಅವಶ್ಯಕತೆಗಿಂತ ಜಾಸ್ತಿ ಮಾತು ಬೇಡ: ಕೆಲಸ ಕೆಡದಂತೆ ಶ್ರೀಗಳ ವಾರ್ನಿಂಗ್!
ರಾಜ್ಯ ರಾಜಕಾರಣದ ಈ ಬಿರುಗಾಳಿಯ ನಡುವೆ ಡಿ.ಕೆ. ಶಿವಕುಮಾರ್ ಅವರಿಗೆ ನೇರವಾಗಿ ಆಶೀರ್ವದಿಸಲು ಶ್ರೀ ಕಾಡುಸಿದ್ದೇಶ್ವರ ಸ್ವಾಮೀಜಿಗಳು ಖುದ್ದಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ
ಈ ಮಹತ್ವದ ಭೇಟಿಗೂ ಮುನ್ನವೇ ಮಠದ ಮೂಲಗಳಿಂದ ಡಿಕೆಶಿಗೆ ರವಾನೆಯಾಗಿರುವ ಸೂಚನೆ ಹೀಗಿದೆ. ಮಾತು ಆಡಿದರೆ ಮುತ್ತು ಒಡೆದು ಹೋಗಲಿದೆ, ಕೆಲಸ ಕೆಡಲಿದೆ ಎಂದಿದ್ದಾರೆ. ಅಲ್ಲದೆ, ಅಧಿಕೃತವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವವರೆಗೂ ಯಾರ ಬಳಿಯೂ ಅವಶ್ಯಕತೆಗಿಂತ ಜಾಸ್ತಿ ಮಾತನಾಡಬೇಡಿ. ಪದಗ್ರಹಣ ಸಂಪೂರ್ಣವಾಗಿ ಮುಗಿಯುವವರೆಗೂ ರಾಜಕೀಯ ಹೇಳಿಕೆಗಳಿಂದ ದೂರವಿರಿ. ರಾಜಕೀಯದಲ್ಲಿ ಕೊನೆಯ ಕ್ಷಣದ ಟ್ವಿಸ್ಟ್‌ಗಳು ಸಾಮಾನ್ಯ ಆಗಿರುವುದರಿಂದ, ಶತ್ರುಗಳ ಕಣ್ಣು ಬೀಳದಂತೆ ಮೌನವಾಗಿ ಗುರಿ ತಲುಪಲು ಶ್ರೀಗಳು ಈ ಕರಾರುವಾಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಅಜ್ಜಯ್ಯನ ಆಜ್ಞೆಯ ಬೆನ್ನಲ್ಲೇ ಡಿಕೆ ಸಹೋದರರ ಹೈ-ಅಲರ್ಟ್ ಆರ್ಡರ್!
ಯಾವಾಗ ನೊಣವಿನಕೆರೆ ಶ್ರೀಗಳಿಂದ ಈ ಎಚ್ಚರಿಕೆ ಸಂದೇಶ ರವಾನೆಯಾಯಿತೋ, ತಕ್ಷಣವೇ ಅಲರ್ಟ್ ಆದ ಡಿ.ಕೆ. ಶಿವಕುಮಾರ್ ಮತ್ತು ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ತಮ್ಮ ಇಡೀ ಬೆಂಬಲಿಗರ ದಂಡಿಗೆ ಕಟ್ಟುನಿಟ್ಟಿನ ಶಿಸ್ತಿನ ಆದೇಶ ಹೊರಡಿಸಿದ್ದಾರೆ. ಪ್ರಮಾಣವಚನ ಮುಗಿಯುವವರೆಗೂ ಯಾವುದೇ ಶಾಸಕರು, ಸಚಿವರು ಅಥವಾ ಕಾರ್ಯಕರ್ತರು ಮಾಧ್ಯಮಗಳ ಮುಂದೆ ಸಂಭ್ರಮಾಚರಣೆ ಮಾಡುವುದಾಗಲಿ, ಸಿಎಂ ಸ್ಥಾನದ ಕುರಿತು ಅನಗತ್ಯ ಹಕ್ಕು ಮಂಡಿಸುವುದಾಗಲಿ ಮಾಡಬಾರದು. ಯಾರೂ ಯಾವುದೇ ಹೇಳಿಕೆ ನೀಡಬಾರದು ಎಂದು ಡಿಕೆ ಸೋದರರು ತಮ್ಮ ಆಪ್ತ ವಲಯಕ್ಕೆ ಕಟು ಸೂಚನೆ ನೀಡಿದ್ದಾರೆ. ಸ್ವಾಮೀಜಿಗಳ ಮೇಲಿರುವ ಅಪಾರ ದೈವಿಕ ನಂಬಿಕೆಯೇ ಇದಕ್ಕೆ ಕಾರಣ ಎನ್ನಲಾಗಿದೆ.
"ನೂರಕ್ಕೆ ನೂರು ಡಿಕೆಶಿ ಸಿಎಂ": ಅಂದು ನುಡಿದ ಭವಿಷ್ಯ ಇಂದು ಸತ್ಯ!
ಈ ಹಿಂದೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಕರೆಸಿ ಹಗ್ಗಜಗ್ಗಾಟ ನಡೆಸುತ್ತಿದ್ದ ಸಂದರ್ಭದಲ್ಲೂ, ನೊಣವಿನಕೆರೆ ಶ್ರೀಗಳು ನೂರಕ್ಕೆ ನೂರು ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗುವುದು ಪಕ್ಕಾ ಎಂದು ಭವಿಷ್ಯ ನುಡಿದಿದ್ದರು. ದೆಹಲಿ ವರಿಷ್ಠರ ಭೇಟಿಗೆ ಮುನ್ನ ಡಿಕೆಶಿ ಎರಡೆರಡು ಬಾರಿ ನೊಣವಿನಕೆರೆ ಅಜ್ಜಯ್ಯನ ಗದ್ದುಗೆಗೆ ಬಂದು ವಿಶೇಷ ಪೂಜೆ ಸಲ್ಲಿಸಿ ಅಪ್ಪಣೆ ಪಡೆದಿದ್ದರು. ಅಜ್ಜಯ್ಯನ ಅಪ್ಪಣೆ ಮತ್ತು ಆಶೀರ್ವಾದ ಇಲ್ಲದೆ ನಾನು ನನ್ನ ಜೀವನದ ಯಾವುದೇ ಪ್ರಮುಖ ರಾಜಕೀಯ ಹೆಜ್ಜೆಯನ್ನು ಇಡುವುದೇ ಇಲ್ಲ ಎಂದು ಡಿಕೆಶಿ ಈ ಹಿಂದೆಯೂ ಸಾರಿ ಸಾರಿ ಹೇಳಿದ್ದರು.
ಚುನಾವಣೆಯ ಟಿಕೆಟ್ ಹಂಚಿಕೆ, ಬಿ-ಫಾರಂ ವಿತರಣೆ, ಕೆಪಿಸಿಸಿ ಸಾರಥ್ಯ ವಹಿಸಿಕೊಂಡ ದಿನದಿಂದ ಹಿಡಿದು ಇಂದಿನವರೆಗೂ ಅಜ್ಜಯ್ಯನ ದಿವ್ಯ ದೃಷ್ಟಿಯಲ್ಲೇ ಮುನ್ನಡೆದಿರುವ ಕನಕಪುರ ಬಂಡೆಗೆ ಈಗ ಕರ್ನಾಟಕದ ಸರ್ವೋಚ್ಚ ಗದ್ದುಗೆ ಸಿಕ್ಕಿದೆ. ಆದರೆ, ಮಠದ ಕಟ್ಟುನಿಟ್ಟಿನ ಆಜ್ಞೆಯಂತೆ ಡಿಕೆಶಿ ಸದ್ಯ ಮೌನದ ರಕ್ಷಣಾ ಕವಚ ತೊಟ್ಟಿದ್ದು, ರಾಜಭವನದಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಆ ಐತಿಹಾಸಿಕ ಕ್ಷಣಕ್ಕಾಗಿ ಇಡೀ ರಾಜ್ಯ ಕುತೂಹಲದಿಂದ ಕಾಯುತ್ತಿದೆ,(ಏಜೆನ್ಸೀಸ್).