HD Kumaraswamy | ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಮಂಡಳ್ಳಿಯಲ್ಲಿ ಸರ್ವೇ ನಡೆಸಲು ಬಂದ ಅಧಿಕಾರಿಗಳ ಮೇಲೆ ನಡೆದಿದೆ ಎನ್ನಲಾದ ಗಲಾಟೆ ಮತ್ತು ರೈತರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿರುವುದನ್ನು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ.
ಪಶ್ಚಿಮ ಬಂಗಾಳದ ಪ್ರವಾಸದಲ್ಲಿರುವ ಎಚ್ಡಿಕೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಧೈರ್ಯವಿದ್ದರೆ ತಮ್ಮನ್ನೇ ಈ ಪ್ರಕರಣದಲ್ಲಿ A1 ಆರೋಪಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಬಹಿರಂಗ ಸವಾಲು ಎಸೆದಿದ್ದಾರೆ.
ಬಿದದಿಯ 9 ಹಳ್ಳಿಗಳ ಪೈಕಿ 3 ಹಳ್ಳಿಗಳಲ್ಲಿ ಸರ್ವೇಗೆ ಅಧಿಕಾರಿಗಳು ಹೋದಾಗ ನಡೆದ ಘಟನೆಗೆ ಸಂಬಂಧಿಸಿದಂತೆ ಇನ್‌ಸ್ಪೆಕ್ಟರ್ ಮುರಳಿ ಯಾರ ಹೆಸರನ್ನೂ ಹಾಕದೆ A1 ಕಾಮನ್ ಮ್ಯಾನ್ ಎಂದು ಒಂದು ಕೇಸ್ ಹಾಕಿದ್ದಾರೆ. ಆದರೆ ರಾಮನಗರದ ಮಹಮ್ಮದ್ ಸಮೀರ್ ಎಂಬ ಚಾಲಕನಿಂದ ಮತ್ತೊಂದು ದೂರು ಪಡೆದು, 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೊದಲಿನಿಂದಲೂ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸುತ್ತಿದ್ದ ಪ್ರಕಾಶ್ ಎಂಬುವವರನ್ನು ಹೆದರಿಸಲು ಉದ್ದೇಶಪೂರ್ವಕವಾಗಿಯೇ A1 ಆರೋಪಿ ಮಾಡಲಾಗಿದೆ.
ಹೆಣ್ಣುಮಕ್ಕಳನ್ನು ಕೊಲೆಗಡುಕರನ್ನಾಗಿ ಮಾಡಬೇಡಿ
ಒಂದೇ ದಿನ ಅಲ್ಲಿಗೆ ಹೋದ ರಾಮನಗರದ ವ್ಯಕ್ತಿಗೆ 11 ಜನರ ಹೆಸರು, ಅದರಲ್ಲೂ ಭಾಗ್ಯಮ್ಮ, ಜಯಮ್ಮ ಎಂಬ ಹೆಣ್ಣುಮಕ್ಕಳ ಹೆಸರುಗಳು ಹೇಗೆ ಗೊತ್ತಾದವು ಎಂದು ಕೇಂದ್ರ ಸಚಿವರು ಪ್ರಶ್ನಿಸಿದ್ದು, ಇಬ್ಬರ ದೂರುಗಳೂ ಕಾಪಿ ಪೇಸ್ಟ್ ಆಗಿದ್ದು, ಪೊಲೀಸರೇ ಈ ದೂರನ್ನು ಬರೆದುಕೊಟ್ಟು ದಬ್ಬಾಳಿಕೆ ನಡೆಸುತ್ತಿದ್ದಾರೆ ಮತ್ತು ಕೊಲೆ ಯತ್ನದ ಕೇಸ್ ಹಾಕಿ ರೈತರನ್ನು ಹಾಗೂ ಹೆಣ್ಣುಮಕ್ಕಳನ್ನು ಕೊಲೆಗಡುಕರನ್ನಾಗಿ ಮಾಡಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದ್ದಾರೆ.
ನಿನ್ನೆ ನಡೆದ ಘಟನೆಗೆ ಕುಮಾರಸ್ವಾಮಿ ಚಿತಾವಣೆ ಕಾರಣ ಎಂದು ಮಾಧ್ಯಮಗಳ ಮುಂದೆ ಹೇಳುವ ಈ ಸರ್ಕಾರಕ್ಕೆ ಧೈರ್ಯವಿದ್ದರೆ ತಮ್ಮ ಮೇಲೆಯೇ ಕೇಸ್ ಹಾಕಿ A1 ಮಾಡಲಿ ಎಂದು ಎಚ್ಡಿಕೆ ಸವಾಲು ಹಾಕಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ಎಚ್ಚರಿಸಿದ ಅವರು, ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಈಗಿನ ಮುಖ್ಯಮಂತ್ರಿಗಳು ಮಂತ್ರಿಯಾಗಿದ್ದಾಗ ಚನ್ನಪಟ್ಟಣದಲ್ಲಿ ಗೋಲಿಬಾರ್ ನಡೆದು ಇಬ್ಬರು ಮೃತಪಟ್ಟಿದ್ದ ಘಟನೆಯನ್ನು ನೆನಪಿಸಿದರು. ಅಂದು ಮಂತ್ರಿಗಳು ಬರುವವರೆಗೆ ಶವ ಎತ್ತಲ್ಲ ಎಂದು ಜನ ಹಠ ಹಿಡಿದಾಗ, ಕುಮಾರಸ್ವಾಮಿ ಮತ್ತು ದೇವೇಗೌಡರು ಹೆಣದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದಿದ್ದರು. ಆದರೆ ಅಂದು ತಾವು ಹೋಗದಿದ್ದರೆ ಶವ ಎತ್ತಲು ಜನ ಒಪ್ಪುತ್ತಿರಲಿಲ್ಲ ಎಂಬುದನ್ನು ಮುಖ್ಯಮಂತ್ರಿಗಳು ಈ ಸಮಯದಲ್ಲಿ ನೆನಪಿಸಿಕೊಳ್ಳಬೇಕು ಎಂದಿದ್ದಾರೆ.
ನಾನೆಂದಿಗೂ ರೈತರ ಪರ ಎಂದ ಎಚ್ಡಿಕೆ
ಕಳೆದ 500 ದಿನಗಳಿಂದ ರೈತರು ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದಾರೆ. ಜಮೀನು ಹೋಗುತ್ತದೆ ಎಂಬ ಆತಂಕದಲ್ಲಿ ಹೆಣ್ಣುಮಕ್ಕಳು ಪೊರಕೆ ತೋರಿಸಿರಬಹುದು. ಅದನ್ನೇ ಕೊಲೆ ಯತ್ನ ಎಂದು ಬಿಂಬಿಸಿ ರೈತ ಮಹಿಳೆಯರು ಮನೆ ಬಿಟ್ಟು ಓಡಿಹೋಗುವ ವಾತಾವರಣ ನಿರ್ಮಿಸಲಾಗಿದೆ. ನರಗುಂದ ಲಾಠಿಚಾರ್ಜ್ ಆದಾಗ ತಮ್ಮ ಮಗನ ಶೂಟಿಂಗ್‌ನಲ್ಲಿದ್ದರೂ ಕೇವಲ 2 ಗಂಟೆಯಲ್ಲಿ ಸ್ಥಳಕ್ಕೆ ಓಡಿದ್ದನ್ನು ನೆನಪಿಸಿಕೊಂಡ ಅವರು, ನಾವೆಂದಿಗೂ ರೈತರ ಪರವೇ ಇರುತ್ತೇವೆ ಎಂದರು. ಬಿಡದಿಯ ಮಂಡಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭಯದ ವಾತಾವರಣವಿದ್ದು, ಶಾಂತಿಯುತವಾಗಿಯೇ ಹೋರಾಟ ಮುಂದುವರಿಸುವಂತೆ ರೈತರಲ್ಲಿ ವಿನಂತಿ ಮಾಡಿರುವ ಕೇಂದ್ರ ಸಚಿವರು, ನಾಡಿದ್ದು ಬೆಳಿಗ್ಗೆ ತಾವು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ನಿಲ್ಲುವುದಾಗಿ ಪ್ರಕಟಿಸಿದ್ದಾರೆ.