ಬೆಂಗಳೂರು: ರಾಜಕಾರಣದಲ್ಲಿ ಜನರ ಸಂಪರ್ಕ ಉಳಿಸಿಕೊಳ್ಳುವುದು ಮುಖ್ಯ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಕುರಿತ ಪ್ರಶ್ನೆಗೆ ಮಹತ್ವದ ಪ್ರತಿಕ್ರಿಯೆ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ನೀಡಿದರು.
ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಸೋಮವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಜಾರಕಿಹೊಳಿ, "ಇದು ವೇಗದ ಕಾಲ. ಆ ವೇಗಕ್ಕೆ ತಕ್ಕಂತೆ ನಾವು ಓಡಬೇಕು. ರಾಜಕಾರಣ ಅಂದರೆ ಹಾಗೆಯೇ. ಓಡದೇ ಇದ್ದರೆ ಟ್ರೇನ್ ಮಿಸ್ ಆಗುತ್ತದೆ" ಎಂದು ಹೇಳಿದರು.
"ಟ್ರೇನ್ ಮಿಸ್ ಆದರೆ ತುಮಕೂರಿಗೋ ಅರಸೀಕೆರೆಗೋ ಗಾಡಿಯಲ್ಲಿ ಹೋಗಿಯಾದರೂ ಟ್ರೇನ್ ಹಿಡಿಯಬೇಕು. ಇಲ್ಲವಾದರೆ ಜನರೇ ಮರೆತುಬಿಡುತ್ತಾರೆ. ಇದು ನಾನು ಹೇಳುವುದಲ್ಲ, ಜನರು ಹೇಳುವ ಮಾತು" ಎಂದರು.
ಮೈಸೂರಿನಲ್ಲಿ ಕುಳಿತುಕೊಂಡೇ ರಾಜಕಾರಣ ಮಾಡಬಹುದು. ಆದರೆ ಜನರ ಸಂಪರ್ಕ ಇರುವವರೆಗೂ ಮಾತ್ರ ನಾಯಕತ್ವ ಉಳಿಯುತ್ತದೆ ಎಂದು ಹೇಳಿದರು.
'ಜನರ ಬೆಂಬಲವೇ ಶಾಶ್ವತ'
ಸಿದ್ದರಾಮಯ್ಯ ಅವರು 'ಜನರ ಹೃದಯ ಸಿಂಹಾಸನವೇ ಶಾಶ್ವತ' ಎಂದು ಹೇಳಿರುವುದನ್ನು ಸಮರ್ಥಿಸಿದ ಜಾರಕಿಹೊಳಿ, "ಅದು ಸರಿಯಾದ ಮಾತು. ಅಧಿಕಾರ ಶಾಶ್ವತವಲ್ಲ. ಮುಖ್ಯಮಂತ್ರಿ ಸ್ಥಾನವೂ ಶಾಶ್ವತವಲ್ಲ. ಜನರ ಸಂಪರ್ಕ ಮತ್ತು ಜನರ ಬೆಂಬಲ ಇರುವವರೆಗೂ ನಾಯಕತ್ವ ಇರುತ್ತದೆ" ಎಂದು ಹೇಳಿದರು.
ಇಡಿ ದಾಳಿ ಕುರಿತು ಪ್ರತಿಕ್ರಿಯೆ
ಇಡಿ ದಾಳಿ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, "ನಮ್ಮನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದಾರೋ ಗೊತ್ತಿಲ್ಲ. ರಾಜಕೀಯ ಉದ್ದೇಶದಿಂದ ನಡೆದಿದೆಯೇ ಅಥವಾ ಸಹಜ ಪ್ರಕ್ರಿಯೆಯ ಭಾಗವೇ ಎಂಬುದು ತಿಳಿಯಲು ಸಮಯ ಬೇಕು" ಎಂದರು. ರಾಜಕೀಯ ಕಾರಣದಿಂದ ದಾಳಿ ನಡೆಸಿರುವುದು ಸಾಬೀತಾದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.
ಬಿಡದಿ ಟೌನ್‌ಶಿಪ್ ಬಗ್ಗೆ ಏನಂದ್ರು?
ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರೈತರ ಹೋರಾಟವನ್ನು ಪ್ರತಿದಿನ ದೂರದರ್ಶನದಲ್ಲಿ ನೋಡುತ್ತಿದ್ದೇನೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಈ ವಿಚಾರವನ್ನು ಪಕ್ಷದ ಹೈಕಮಾಂಡ್ ನಾಯಕರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಿಸುತ್ತಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲಿದ್ದು, ನಮ್ಮ ಅಭಿಪ್ರಾಯವನ್ನೂ ತಿಳಿಸುತ್ತೇವೆ ಎಂದು ಹೇಳಿದರು.
ಬರುವ ಚುನಾವಣೆಯ ಮೇಲೆ ಇದರ ಪರಿಣಾಮ ಏನಾಗಬಹುದು ಎಂಬುದನ್ನೂ ಪಕ್ಷದ ನಾಯಕರಿಗೆ ತಿಳಿಸುತ್ತೇವೆ. ಆದರೆ ಇದುವರೆಗೆ ಸಚಿವ ಸಂಪುಟದಲ್ಲಿ ಬಿಡದಿ ಟೌನ್‌ಶಿಪ್ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.