ಬೆಂಗಳೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ  
ರಾಜ್ಯ

ಅಂಬೇಡ್ಕರನ್ನು ಗ್ರಹಿಸದಿದ್ದರೆ, ಆಶಯ ದಕ್ಕುವುದಿಲ್ಲ: ಪ್ರೊ.ಬಿ. ರಮೇಶ್ ಪ್ರತಿಪಾದನೆ

ಪ್ರಮುಖ ಮುಖ್ಯಾಂಶಗಳು

  • ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಸ್ತಕಗಳನ್ನು ಆಳವಾಗಿ ಅಧ್ಯಯನ ನಡೆಸದಿದ್ದರೆ ಅವರ ಪುಸ್ತಕಗಳು ದಕ್ಕುವುದಿಲ್ಲ.
  • ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಗ್ರ ಆಧುನಿಕ ಚಿಂತನೆಗಳು’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ
  • ಸರ್ವಕಾಲಕ್ಕೂ ಸಲ್ಲುವಂತಹ ವ್ಯಕ್ತಿ, ವ್ಯಕ್ತಿತ್ವ.
ಬೆಂಗಳೂರು: ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಸ್ತಕಗಳನ್ನು ಆಳವಾಗಿ ಅಧ್ಯಯನ ನಡೆಸದಿದ್ದರೆ ಅವರ ಪುಸ್ತಕಗಳು ದಕ್ಕುವುದಿಲ್ಲ. ಇಂದಿನ ಯುವ ಪೀಳಿಗೆ ಬಾಬಾಸಾಹೇಬರ ನಿರೀಕ್ಷೆಗಳನ್ನು ಪೂರೈಸಲು ಪ್ರತಿ ವಿಷಯವನ್ನು ವೈಜ್ಞಾನಿಕವಾಗಿ ಗ್ರಹಿಸಿ ಅರ್ಥ ಮಾಡಿಕೊಂಡು ಮನನ ಮಾಡುವ ಮೂಲಕ ಅವರ ಆಶಯಗಳನ್ನು ಎತ್ತಿ ಹಿಡಿಯಬೇಕಿದೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ‘ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಗ್ರ ಆಧುನಿಕ ಚಿಂತನೆಗಳು’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಬಾಸಾಹೇಬರು 21ನೇ ಶತಮಾನದ ಭವಿಷ್ಯಕ್ಕೆ ಮಾರ್ಗದಾತರಾಗಿದ್ದಾರೆ. ಸರ್ವಕಾಲಕ್ಕೂ ಸಲ್ಲುವಂತಹ ವ್ಯಕ್ತಿ, ವ್ಯಕ್ತಿತ್ವ. ಮೂರು ಸಾವಿರ ವರ್ಷಗಳ ಇತಿಹಾಸದಲ್ಲಿ ರಾಜರ ಆಳ್ವಿಕೆಯನ್ನು ಅರಮನೆಯಿಂದ ಪ್ರಜೆಗಳ ಬಾಗಿಲಿಗೆ ತಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆ ನೀಡಿದರು. ಶಿಕ್ಷಣವಂತ, ಹಣವಂತ, ಭೂ ಒಡೆಯರಿಗೆ ಮಾತ್ರ ಇದ್ದ ಮತದಾನದ ಹಕ್ಕನ್ನು ದಮನಿತರು, ಮಹಿಳೆಯರು, ಹಿಂದುಳಿದವರು ಸೇರಿ ಎಲ್ಲ ವರ್ಗಕ್ಕೂ ಮತದಾನದ ಹಕ್ಕನ್ನು ಕಲ್ಪಿಸಿ ಪ್ರಜಾತಂತ್ರ ಆಳ್ವಿಕೆ ಜಾರಿಯಾಗುವಂತೆ ಮಾಡಿ ದೇಶದ ದಿಕ್ಸೂಚಿ ರೂಪಿಸಿದರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂ.ವಿವಿ ಕುಲಪತಿ ಡಾ. ಎಸ್.ಎಂ. ಜಯಕರ್ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಅವರು ವಿಶ್ವವೇ ಮೆಚ್ಚಿದ ಮಹಾ ಜ್ಞಾನಿ, ಅವರ ಜ್ಞಾನದ ಸಂಪತ್ತು ಸರ್ವಕಾಲಕ್ಕೂ ಪ್ರಸ್ತುತವಾಗಿರಲಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಕಾನೂನು ನೀತಿಗಳನ್ನು ರೂಪಿಸಿ ದೇಶಕ್ಕೆ ಸಂವಿಧಾನದ ಮೂಲಕ ಭದ್ರ ಬುನಾದಿ ಹಾಕಿದ್ದಾರೆ ಎಂದರು.
ಅಂಬೇಡ್ಕರ್ ಚಿಂತನೆಗಳನ್ನು ಎಲ್ಲ ಆಯಾಮದಲ್ಲಿಯೂ ಅಧ್ಯಯನ ನಡೆಸಬೇಕು. ಇಂದಿನ ಯುವ ಪೀಳಿಗೆ ಅಂಬೇಡ್ಕರ್ ದೂರದೃಷ್ಟಿ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಮೂಲಕ ಅಂಬೇಡ್ಕರ್ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ತರಬೇತಿ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ. ಸಾಬೀರ್ ಅಹನದ್ ಮುಲ್ಲಾ, ಜನಪದ ಕಲಾವಿದ ಡಾ. ಅಪ್ಪಗೆರೆ ತಿಮ್ಮರಾಜು, ಪ್ರಾಧ್ಯಾಪಕ ಪ್ರೊ.ಎಚ್. ವಿಶ್ವನಾಥ್ ಉಪಸ್ಥಿತರಿದ್ದರು.
ಅಂಬೇಡ್ಕರ್ ವಿಚಾರಗಳು ವಿದ್ಯಾರ್ಥಿಗಳಿಗೆ ತಲುಪಿಸುವ ದೃಷ್ಟಿಯಿಂದ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಸಂಶೋಧನೆ ಮತ್ತು ಅಧ್ಯಯನ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಮಗ್ರವಾಗಿ ನಡೆಯಬೇಕು. ಆ ನಿಟ್ಟಿನಲ್ಲಿ ರಾಜ್ಯದ ಎಲ್ಲ ಅಧ್ಯಯನ ಕೇಂದ್ರಗಳಿಗೆ ಪೂರ್ಣಕಾಲಿಕ ನಿರ್ದೇಶಕರನ್ನು ನೇಮಿಸಬೇಕು.
- ಡಾ. ಸಿ. ಸೋಮಶೇಖರ್, ನಿರ್ದೇಶಕ, ಡಾ. ಬಿ,ಆರ್, ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ