ಗುರುಮಠಕಲ್ ಕ್ಷೇತ್ರದಲ್ಲಿ ಬೆಳೆ ಹಾನಿಯಾದ ಬಗ್ಗೆ ಜಿಲ್ಲಾಡಳಿತ ಸರ್ಕಾರಕ್ಕೆ ಪೋಟೋಸಮೇತ ವರದಿ ಕಳಿಸಿದ್ದನ್ನು ಶಾಸಕ ಶರಣಗೌಡ ಕಂದಕೂರ ಶನಿವಾರ ಯಾದಗಿರಿಯಲ್ಲಿ ಮಾಧ್ಯಮದ ಮುಂದೆ ಪ್ರದರ್ಶಿಸಿದರು.
- ಶಾಸಕ ಶರಣಗೌಡ ಕಂದಕೂರ ಎಚ್ಚರಿಕೆ
- ಯಾದಗಿರಿ, ಗುರುಮಠಕಳ್ ಕೈಬಿಟ್ಟಿದ್ದೇಕೆ?
ಸರ್ಕಾರ ೨ನೇ ಬರಪಟ್ಟಿಯಲ್ಲಿ ಯಾದಗಿರಿ ಮತ್ತು ಗುರುಮಠಕಲ್ ತಾಲೂಕು ಸೇರಿಸುವುದಾಗಿ ಹೇಳಿದೆ. ಕೊಟ್ಟ ಮಾತಿನಂತೆ ನಡೆಯದಿದ್ದರೆ ಕ್ಷೇತ್ರದ ರೈತರ ಪರವಾಗಿ ವಿಧಾನಸೌಧ ಎದುರು ಹೋರಾಟ ನಡೆಸುವುದಾಗಿ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಎಚ್ಚರಿಸಿದ್ದಾರೆ.
ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ, ಬೆಳೆ ನಷ್ಟದ ನಡುವೆಯೂ ಯಾದಗಿರಿ ಮತ್ತು ಗುರುಮಠಕಲ್ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಶನಿವಾರ ಸುದ್ದಿಗಾರರ ಎದುರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ವರದಿಗಳಲ್ಲೇ ಯಾದಗಿರಿ ಮತ್ತು ಗುರುಮಠಕಲ್ ನಲ್ಲಿ ಮಳೆ ಕೊರತೆ ಹೆಚ್ಚಿರುವುದಾಗಿ ಉಲ್ಲೆಖಿಸಲಾಗಿದೆ. ಆದರೂ ಕೇವಲ ಒಂದು ತಾಲೂಕು ಬರಪೀಡಿತ ಘೋಷಿಸಿರುವುದು ಯಾವ ಮಾನದಂಡ ಆಧರಿಸಿ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಜೂ.೧ರಿಂದ ಜುಲೈವರೆಗೆ ಸರ್ಕಾರದ ವರದಿ ಪ್ರಕಾರ ಗುರುಮಠಕಲ್‌ನಲ್ಲಿ ಶೇ.೫೮ ಹಾಗೂ ಯಾದಗಿರಿಯಲ್ಲಿ ಶೇ.೫೯ ಮಳೆ ಕೊರತೆಯಾಗಿದೆ. ಆ.೨೮ರವರೆಗಿನ ವರದಿಯಲ್ಲೂ ಗುರುಮಠಕಲ್‌ನಲ್ಲಿ ಶೇ.೪೪, ಯಾದಗಿರಿ ಶೇ.೫೪, ಶಹಾಪುರ ಶೇ.೫೦ ಹಾಗೂ ಸುರಪುರದಲ್ಲಿ ಶೇ.೩೫ ಮಳೆ ಕೊರತೆ ಇದೆ. ಈ ಅಂಕಿ-ಅಂಶ ನಾನು ಹೇಳುವುದಲ್ಲ. ಸರ್ಕಾರದ ಇಲಾಖೆಗಳೇ ನೀಡಿರುವ ವರದಿ. ಹಾಗಿದ್ದರೂ ಯಾದಗಿರಿ ಮತ್ತು ಗುರುಮಠಕಲ್ ಬರ ಪಟ್ಟಿಗೆ ಸೇರಿಸದಿರಲು ಕಾರಣವೇನು ಎಂದು ಪ್ರಶ್ನಿಸಿದರು.
ಜ್ವರ ಬಂದದ್ದು ಎಮ್ಮೆಗೆ
ಬರೆ ಹಾಕಿದ್ದು ಎತ್ತಿಗೆ
ಬರ ಘೋಷಣೆ ವಿಚಾರದಲ್ಲಿ ಸರ್ಕಾರದ ಕ್ರಮವನ್ನು ಟೀಕಿಸಿದ ಕಂದಕೂರ, ಜ್ವರ ಬಂದದ್ದು ಎಮ್ಮೆಗೆ, ಬರೆ ಹಾಕಿದ್ದು ಎತ್ತಿಗೆ ಎಂಬಂತಾಗಿದೆ. ಸಂಕಷ್ಟದಲ್ಲಿರುವ ತಾಲೂಕುಗಳನ್ನು ಬಿಟ್ಟಿರುವುದು ಸರಿಯಲ್ಲ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿ ಪರಿಶೀಲಿಸಿ ಬೆಳೆ ನಷ್ಟ, ಮಳೆ ಕೊರತೆ ಬಗ್ಗೆ ವರದಿ ನೀಡಿದ್ದಾರೆ. ಆದರೂ ಆ ವರದಿಗಳನ್ನು ಪರಿಗಣಿಸದೆ ರೈತರಿಗೆ ಅನ್ಯಾಯ ಮಾಡಲಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ಕಿಡಿಕಾರಿದರು. ಆಗಷ್ಟ್ ಮೊದಲ ವಾರ ನಾಲ್ಕೈದು ದಿನ ಮಳೆಯಾಗಿದೆ. ಅದನ್ನೇ ಪರಿಗಣಿಸಿ ಬರ ಪರಿಸ್ಥಿತಿ ಇಲ್ಲ ಎಂದು ತೀರ್ಮಾನಿಸಿದರೆ ರೈತರಿಗೆ ಮರಣಶಾಸನ ಬರೆದಂತಾಗುತ್ತದೆ. ನಾಲ್ಕೈದು ದಿನದ ಮಳೆಯಿಂದ ಇಡೀ ಹಂಗಾಮಿನಲ್ಲಿ ಆಗಿರುವ ನಷ್ಟ ಸರಿಯಾಗುವುದಿಲ್ಲ ಎಂದರು. ಒಂದು ಹಂತದಲ್ಲಿ ಶೇ.೫೮-೫೯ ಮಳೆ ಕೊರತೆ ಇದೆ ಎಂದು ಹೇಳಿ, ನಂತರದ ವರದಿಯಲ್ಲಿ ಬೇರೆ ಅಂಕಿ-ಅಂಶ ತೋರಿಸುವುದಾದರೆ ಸರ್ಕಾರ ಸ್ಪಷ್ಟನೆ ನೀಡಬೇಕು. ಯಾವ ಆಧಾರದ ಮೇಲೆ ಕೆಲ ತಾಲೂಕುಗಳನ್ನು ಬರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಕ್ಕೆ ಸಾಲ ಮನ್ನಾ ಮಾಡಿ ಎಂದು ಕೇಳುತ್ತಿಲ್ಲ. ಆದರೆ ಪ್ರಕೃತಿ ವಿಕೋಪದಿಂದ ಸಂಕಷ್ಟದಲ್ಲಿರುವ ರೈತರನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದು. ಕನಿಷ್ಠ ಬೆಳೆ ನಷ್ಟ, ಬರ ಪರಿಹಾರ ಹಾಗೂ ಅಗತ್ಯ ನೆರವು ನೀಡಬೇಕು. ರೈತರ ಬಗ್ಗೆ ಕಾಳಜಿ ಇರಬೇಕಾದರೆ ತಾಯಿ ಹೃದಯವಿರುವವರು ಸರ್ಕಾರದಲ್ಲಿ ಇರಬೇಕು. ಸರ್ಕಾರ ಪಕ್ಷ-ರಾಜಕೀಯವನ್ನು ಬದಿಗಿಟ್ಟು ರೈತರ ಸಮಸ್ಯೆಗೆ ಸ್ಪಂದಿಸಬೇಕು.| ಶರಣಗೌಡ ಕಂದಕೂರಗುರುಮಠಕಲ್ ಶಾಸಕ