ಐನಾಪುರ ಏತ ನೀರಾವರಿ ಯೋಜನೆ ಶ್ರೀ ಆರಂಭಿಸಬೇಕು ಎಂದು ಒತ್ತಾಯಿಸಿ ಐನಾಪುರದಲ್ಲಿ ಮುಲ್ಲಾಮಾರಿ ಏತ ನೀರಾವರಿ ಅಭಿವೃದ್ಧಿ ಸಮಿತಿಯಿಂದ ಮಂಗಳವಾರ ಭಾಲ್ಕಿ-ಚಿಂಚೋಳಿ ಹೆದ್ದಾರಿಯಲ್ಲಿ ಸಂಚಾರ ತಡೆದು ಹೋರಾಟ ಚಳವಳಿ ನಡೆಸಿ ಕಂದಾಯ ನಿರೀಕ ರವಿಕುಮಾರ ಚಿಟ್ಟಾ, ನೀರಾವರಿ ನಿಗಮದ ಉಪ ಅಭಿಯಂತರ ಸತ್ಯಪ್ರಕಾಶ ಮೂಲಗೆ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಶ್ರೀ ಉಪಮನ್ಯು ಶಿವಾಚಾರ್ಯ, ಶಿವಾನಂದ ಮಾಲಿಪಾಟೀಲ್, ಧನರಾಜ ಸ್ವಾಮಿ ಇತರರಿದ್ದರು.
- ಐನಾಪುರದಲ್ಲಿ ಭಾಲ್ಕಿ-ಚಿಂಚೋಳಿ ಹೆದ್ದಾರಿಯಲ್ಲಿ ಸಂಚಾರ ತಡೆದು ಹೋರಾಟ
ಚಿಂಚೋಳಿ: ದೇಶಕ್ಕೆ ಅನ್ನ ನೀಡುವ ರೈತ ಕಣ್ಣೀರು ಹಾಕಿದರೆ ಶಾಪ ತಟ್ಟದೆ ಇರಲಾರದು. ಕಳೆದ ಎರಡು ದಶಕಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ ಸರ್ಕಾರಗಳು ರೈತರ ಬೇಡಿಕೆ ಈಡೇರಿಸಲು ಮುಂದಾಗುತ್ತಿಲ್ಲ ಎಂದು ಐನಾಪುರದ ಸಿದ್ಧಲಿಂಗೇಶ್ವರ ಹಿರೇಮಠದ ಶ್ರೀ ಉಪಮನ್ಯು ಶಿವಾಚಾರ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಐನಾಪುರ ಏತ ನೀರಾವರಿ ಯೋಜನೆ ಆರಂಭಕ್ಕೆ ಒತ್ತಾಯಿಸಿ ಐನಾಪುರದ ಛತ್ರಪತಿ ಶಿವಾಜಿ ವೃತ್ತದ ಬಳಿ ಮುಲ್ಲಾಮಾರಿ ಏತ ನೀರಾವರಿ ಅಭಿವೃದ್ಧಿ ಸಮಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಭಾಲ್ಕಿ- ಚಿಂಚೋಳಿ ಹೆದ್ದಾರಿಯಲ್ಲಿ ಸಂಚಾರ ತಡೆ ಹೋರಾಟದಲ್ಲಿ ಮಾತನಾಡಿ, ಸಾಂಕೇತಿಕವಾಗಿ ರಸ್ತೆ ತಡೆ ನಡೆಸಿ ಮನವಿ ಸಲ್ಲಿಸಲಾಗುತ್ತಿದ್ದು, ನಮ್ಮ ಬೇಡಿಕೆ ಈಡೇರುವವರೆಗೆ ಅರ್ನಿದಿಷ್ಟಾವಧಿ ಧರಣಿ ಮುಂದುವರೆಯಲಿದೆ. ಒಂದು ವೇಳೆ ಸರ್ಕಾರವು ಐನಾಪುರ ಏತ ನೀರಾವರಿ ಯೋಜನೆಯನ್ನು ನಿರ್ಲಕ್ಷಿಸಿದರೆ ಸಹಸ್ರಾರು ಸಂಖ್ಯೆಯಲ್ಲಿ ರೈತರು, ಪೂಜ್ಯರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಐನಾಪುರ ಕಂದಾಯ ನಿರೀಕ್ಷಕ ರವಿಕುಮಾರ ಚಿಟ್ಟಾ, ಕರ್ನಾಟಕ ನೀರಾವರಿ ನಿಗಮದ ಉಪ ಅಭಿಯಂತರ ಸತ್ಯಪ್ರಕಾಶ ಮೂಲಗೆ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ನಿಗಮದ ಸಹಾಯಕ ಅಭಿಯಂತರ ಅಮೃತ ಪವಾರ, ಕಿರಿಯ ಸಹಾಯಕ ಅಭಿಯಂತರ ವಿನಾಯಕ ಚವ್ಹಾಣ್ ಜತೆಗಿದ್ದರು.
ಸಮಿತಿ ಸಂಸ್ಥಾಪಕ ಶಿವಾನಂದ ಮಾಲಿ ಪಾಟೀಲ್, ಪ್ರಮುಖರಾದ ಧನರಾಜ ಸ್ವಾಮಿ, ಮೋಹನ ಐನಾಪುರ, ವೀರಶೆಟ್ಟಿ ದುಬಲಗುಂಡಿ, ನಾಗಶೆಟ್ಟಿ ಕೌನಳ್ಳಿ, ನವೀನ್ ಮಾಲೂರ, ಸೋಮಶೇಖರ ಗಡಿನಿಂಗದಳ್ಳಿ, ಶಿವಶರಣಪ್ಪ ಕೋರವಾರ, ದತ್ತು ಇಂಚೂರ, ಶಿವಕುಮಾರ ಮಾಡಬೂಳ, ರಾಜಕುಮಾರ ಮಾಡಬೂಳ, ನರಸಿಂಗರಾವ ಮಾಲೂರ, ವೈಜನಾಥ ಜಮಾದಾರ, ಕಲ್ಲಪ್ಪ ವಾಡೆ, ರಾಜು, ರವಿ ಧನಗರ, ಸಂಗಮೇಶ ಟೇಕೂರ, ಶಿವಕುಮಾರ ಮಂದರಗಿ, ಮಹೇಶ ಮಂದರಗಿ, ಸುನೀಲ ಅಂಕಲಗಿ, ರವಿ ಪಾಟೀಲ್, ನಾಗಶೆಟ್ಟಿ ಕೌನಳ್ಳಿ ಇತರರಿದ್ದರು.
ಈಗಾಗಲೇ ಅನುದಾನ ಬಂದಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಗುತ್ತಿಗೆದಾರರು ಕಾಮಗಾರಿ ನೀಲಿ ನಕ್ಷೆ ಸಲ್ಲಿಸಿ ಅನುಮೋದನೆ ಪಡೆಯಬೇಕಾಗಿದೆ. ಬಹುತೇಕ ತಾಂತ್ರಿಕ ಕೆಲಸಗಳು ಮುಗಿದಿದ್ದು, ಮೇ ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು.
ಕಳೆದ ಎರಡು ದಶಕಗಳಿಂದ ಐನಾಪುರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹೋರಾಟ ನಡೆಸುತ್ತಿದ್ದೇವೆ. ನಮ್ಮದು ಯಾವುದೇ ಪಕ್ಷ ಅಥವಾ ವ್ಯಕ್ತಿ ವಿರುದ್ಧದ ಹೋರಾಟವಲ್ಲ. ನೀರಿಗಾಗಿ ಹಾಗೂ ರೈತರ ಅಭಿವೃದ್ಧಿಗಾಗಿ ರಸ್ತೆಗೆ ಇಳಿದಿದ್ದೇವೆ. ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಬೇಕು. ನ್ಯಾಯ ಸಿಗುವವರೆಗೂ ಧರಣಿ ಮುಂದುವರಿಯಲಿದೆ.